ನವದೆಹಲಿ(New Deelhi): ದೇಶಾದ್ಯಂತ ಕಲ್ಲಿದ್ದಲು(Coal) ಕೊರತೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ದೇಶಾದ್ಯಂತ ಕಲ್ಲಿದ್ದಲು ಪೂರೈಕೆಗೆ ಭಾರತವು ಕೆಲವು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಿದೆ.
ವಿದ್ಯುತ್ ಸ್ಥಾವರಗಳಲ್ಲಿ ಖಾಲಿಯಾಗುತ್ತಿರುವ ದಾಸ್ತಾನುಗಳನ್ನು ಮರುಪೂರಣಗೊಳಿಸಲು ರಾಷ್ಟ್ರವು ಪರದಾಡುತ್ತಿದ್ದು, ಕಲ್ಲಿದ್ದಲು ರೈಲು ಗಾಡಿಗಳ ವೇಗದ ಚಲನೆಗೆ ಅನುಕೂಲವಾಗಲು ಕೆಲವು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಸುಡುವ ಬೇಸಿಗೆಯು ಕಲ್ಲಿದ್ದಲಿನ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ದೇಶದ 70% ರಷ್ಟು ವಿದ್ಯುತ್ ಉತ್ಪಾದನೆಯ ಮೂಲ ಕಲ್ಲಿದ್ದಲು. ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ಭಾರತದ ಹಲವಾರು ಭಾಗಗಳು ದೀರ್ಘಾವಧಿಯ ಕತ್ತಲನ್ನು ಎದುರಿಸುತ್ತಿವೆ. ಹೀಗಾಗಿ ಪ್ಯಾಸೆಂಜರ್ ರೈಲುಗಳ ಮಾರ್ಗಗಳಲ್ಲಿ ಕಲ್ಲಿದ್ದಲು ದಾಸ್ತಾನು ಹೊತ್ತ ರೈಲುಗಳ ಸುಗಮ ಸಂಚಾರಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಈ ಕ್ರಮವು ತಾತ್ಕಾಲಿಕವಾಗಿದ್ದು, ಪರಿಸ್ಥಿತಿ ಸಾಮಾನ್ಯಸ್ಥಿತಿಗೆ ಮರಳಿದ ತಕ್ಷಣ ಪ್ರಯಾಣಿಕರ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ ಎಂದು ಏಷ್ಯಾದ ಅತಿದೊಡ್ಡ ನೆಟ್ವರ್ಕ್ಗಳಲ್ಲಿ ಒಂದಾದ ಭಾರತೀಯ ರೈಲ್ವೆಯ ಕಾರ್ಯನಿರ್ವಾಹಕ ನಿರ್ದೇಶಕ ಗೌರವ್ ಕೃಷ್ಣ ಬನ್ಸಾಲ್ ಹೇಳಿದ್ದಾರೆ.