ನವದೆಹಲಿ(Newdelhi): ಕಲ್ಲಿದ್ದಲು ತೆರಿಗೆ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್’ಗಢ, ಜಾರ್ಖಂಡ್ ಮತ್ತು ಕರ್ನಾಟಕದಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದೆ.
ಛತ್ತೀಸ್’ಗಢದ ರಾಜಧಾನಿ ರಾಯಪುರ, ಕೊರಬಾ, ದುರ್ಗ್, ಜಾರ್ಖಂಡ್‌ನ ರಾಂಚಿ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಇದರಲ್ಲಿ ಛತ್ತೀಸಗಢ ರಾಜ್ಯ ಸರ್ಕಾರದ ಕಾರ್ಯದರ್ಶಿ ಅನ್ಬಳಗನ್ ಪಿ. ಮತ್ತು ಐಎಎಸ್ ಅಧಿಕಾರಿ ಸೇರಿದಂತೆ ಪ್ರಮುಖರು ಒಳಗೊಂಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯಿ ಮತ್ತು ಕೆಲವು ಉದ್ಯಮಿಗಳ ಮೇಲೆ ದಾಳಿ ನಡೆಸಲಾಗಿತ್ತು. ಛತ್ತೀಸಗಢದಲ್ಲಿ ಪ್ರತಿ ಟನ್ ಕಲ್ಲಿದ್ದಲು ಸಾಗಣೆಗೆ ಅಕ್ರಮವಾಗಿ ₹25 ವಸೂಲಿ ಮಾಡಲಾಗಿದ್ದು, ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು, ಮಧ್ಯವರ್ತಿಗಳು ಈ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂದು ಇ.ಡಿ. ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಉಪ ಕಾರ್ಯದರ್ಶಿ ಸೌಮ್ಯಾ ಚಾರಾಸಿಯಾ, ವಿಷ್ಣೋಯಿ, ಕಲ್ಲಿದ್ದಲು ವರ್ತಕ ಸೂರ್ಯಕಾಂತ್ ತಿವಾರಿ, ಲಕ್ಷ್ಮೀಕಾಂತ್ ತಿವಾರಿ ಮತ್ತು ಇನ್ನೊಬ್ಬ ಉದ್ಯಮಿ ಸುನಿಲ್ ಅಗರವಾಲ್ ಅವರನ್ನು ಬಂಧಿಸಲಾಗಿದೆ.