ಬೆಂಗಳೂರು : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಕೊಕೇನ್ ಸೀಜ್ ಮಾಡಿದ್ದಾರೆ. ಬ್ರೆಜಿಲ್‌ನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಬರೋಬ್ಬರಿ 38.60 ಕೋಟಿ ರೂ. ಮೌಲ್ಯದ 7.72 ಕೆಜಿ ಕೊಕೇನ್ ಅನ್ನು ಜಪ್ತಿ ಮಾಡಲಾಗಿದೆ. ಇದು ವಿಮಾನ ನಿಲ್ದಾಣದ ಕಸ್ಟಮ್ಸ್ ಇತಿಹಾಸದಲ್ಲೇ ಅತಿ ದೊಡ್ಡ ಮಾದಕವಸ್ತು ಜಪ್ತಿ ಕಾರ್ಯಾಚರಣೆ ಎಂದು ಹೇಳಲಾಗಿದೆ.
ಬ್ರೆಜಿಲ್‌ನ ಸಾವೊಪೊಲೊದಿಂದ ಬಂದಿದ್ದ ಓರ್ವ ಪ್ರಯಾಣಿಕನನ್ನು ಅನುಮಾನದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಬೃಹತ್ ಪ್ರಮಾಣದ ಕೊಕೇನ್ ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಆತನನ್ನು ಹೆಚ್ಚಿನ ವಿಚಾರಣೆಗಾಗಿ ಒಳಪಡಿಸಲಾಗಿದ್ದು, ಈ ಕಳ್ಳಸಾಗಣೆ ಜಾಲದ ಹಿಂದಿರುವವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.















