ಮನೆ ರಾಜ್ಯ ವರ್ಷದ ಮೊದಲ ಮಳೆಗೆ ಕೊಚ್ಚಿ ಹೋದ ಕಾಫಿ ಬೀಜ – ರೈತರ ಕಣ್ಣೀರು..!

ವರ್ಷದ ಮೊದಲ ಮಳೆಗೆ ಕೊಚ್ಚಿ ಹೋದ ಕಾಫಿ ಬೀಜ – ರೈತರ ಕಣ್ಣೀರು..!

0

ಚಿಕ್ಕಮಗಳೂರು : ಕಾಫಿನಾಡಲ್ಲಿ ವರ್ಷದ ಮೊದಲ ಮಳೆಯೇ ರೈತರ ಕಣ್ಣಲ್ಲಿ ನೀರು ತರಿಸಿದೆ. ಮನೆಗಳ ಮುಂದೆ ಒಣಗಿಸಿದ್ದ ಕಾಫಿ ಬೀಜ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.

ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ಬೆಳೆಗಾರರು ಕಾಫಿಯನ್ನು ಒಣಗಿಸಲು ಪ್ರಕೃತಿ ಜೊತೆ ಹೋರಾಡುತ್ತಿದ್ದರು. ಇಂದು (ಜ.13) ಮಧ್ಯಾಹ್ನದ ನಂತರ ಏಕಾಏಕಿ ಧಾರಾಕಾರ ಮಳೆ ಬಂದಿದೆ.

ಇದರಿಂದ ಮನೆಂಗಳದಲ್ಲಿದ್ದ ಕಾಫಿ ಬೀಜಗಳು ನೀರಲ್ಲಿ ತೇಲಿ ಹೋಗಿವೆ. ಈ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳಸ, ಕುದುರೆಮುಖ, ಹೊರನಾಡು, ಶೃಂಗೇರಿ, ಮೂಡಿಗೆರೆ, ಬಾಳೆಹೊನ್ನೂರು ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಒಂದು ಗಂಟೆಗಳ ಕಾಲ ಭಾರೀ ಗಾಳಿಯೊಂದಿಗೆ ಮಳೆಯಾಗಿದೆ.

ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೋಡ ಕವಿದ ವಾತಾವರಣದ ನಡುವೆ ಕಾಫಿ ಒಣಗಿಸುವುದೇ ದೊಡ್ಡ ಸವಾಲಾಗಿತ್ತು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಸುರಿದ ಈ ಧಾರಾಕಾರ ಮಳೆ ಅನ್ನದಾತರ ಆತಂಕವನ್ನು ಇಮ್ಮಡಿಗೊಳಿಸಿದೆ. ಅಕಾಲಿಕ ಮಳೆಯ ಹೊಡೆತಕ್ಕೆ ಗಿಡದಲ್ಲೇ ಹಣ್ಣಾಗಿರುವ ಕಾಫಿ ನೆಲಕ್ಕುದುರುತ್ತಿದ್ದರೆ, ಮತ್ತೊಂದೆಡೆ ಕಟಾವಿಗೆ ಬಂದಿರುವ ಭತ್ತದ ಬೆಳೆ ಕೂಡ ನೆಲಕಚ್ಚುವ ಭೀತಿ ಎದುರಾಗಿದೆ.