ಮಂಡ್ಯ(Mandya) : ಶ್ರೀರಂಗಪಟ್ಟಣದ ಸ್ನಾನ ಘಟ್ಟದ ಬಳಿ ಇರುವ ರಕ್ಷಣಾ ಕೋಟೆಯ ತಡೆಗೋಡೆ ಶಿಥಿಲಗೊಂಡು ಸುಮಾರು 70 ಮೀಟರ್ ನಷ್ಟು ಕುಸಿದು ಬಿದ್ದಿದೆ.
ರಕ್ಷಣಾ ಗೋಡೆಗೆ ಅಳವಡಿಸಿದ್ದ ದಿಂಡು ಕಲ್ಲುಗಳು ಉರುಳಿ ಬಿದ್ದಿವೆ. ಜೊತೆಗೆ ಕೋಟೆಯ ಸುತ್ತಮುತ್ತಲೂ ಗಿಡ ಗಂಟಿಗಳು ಬೆಳೆದು ತಡೆಗೋಡೆ ಶಿಥಿಲಗೊಂಡಿದೆ.
ಭಾರತೀಯ ಪುರಾತತ್ವ ಇಲಾಖೆಯಿಂದ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಐತಿಹಾಸಿಕ ಕೋಟೆ, ಪ್ರತಿ ಬಾರಿ ಮಳೆಗಾಲದಲ್ಲಿ ಹಂತ ಹಂತವಾಗಿ ಕುಸಿಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಅಲ್ಲದೆ ಕುಸಿದಿರುವ ಭಾಗವನ್ನು ಸರಿಯಾಗಿ ದುರಸ್ತಿ ಮಾಡದೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರತಿ ಬಾರಿ ಕುಸಿದು ಬೀಳುತ್ತಿದ್ದರೂ ಸರಿಯಾದ ರೀತಿಯಲ್ಲಿ ದುರಸ್ಥಿಗೊಳಿಸುವ ಕಾರ್ಯ ನಡೆಯುತ್ತಿಲ್ಲ. ಐತಿಹಾಸಿಕ ಕೋಟೆಗಳನ್ನು ನಿರ್ಲಕ್ಷಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತೀಯ ಪುರಾತತ್ವ ಇಲಾಖೆಗೆ ಇದರಿಂದ ಕೋಟ್ಯಾಂತರ ರೂ. ಆದಾಯ ಬರುತ್ತಿದ್ದರೂ, ಕೋಟೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.