ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ ಕಂಬನಿ ಮಿಡಿದಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಮಸ್ತೆ, ಬಯಲು ಸೀಮೆಯ ಹೃದಯಕ್ಕೆ ನಮನ. ನೀವೆಂದರೆ ತುಂಬಾ ಪ್ರೀತಿ, ತುಂಬಾ ಖುಷಿ, ತುಂಬಾ ನೆನಪು. ನೀವೊಬ್ಬ ನಾಡುಕಂಡ ಉತ್ಕೃಷ್ಟ ಕಲಾವಿದ. ಹೋಗಿಬನ್ನಿ, ಇದು ಸಾವಲ್ಲ ನಿಮ್ಮ ಹುಟ್ಟು. ನಮನ + ಧನ್ಯವಾದ ರಾಜಣ್ಣ ಎಂದು ಬರೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ರಾಜು ತಾಳಿಕೋಟೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ರಾಜು ತಾಳಿಕೋಟೆ ಕುಸಿದು ಬಿದ್ದಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಕೆಲ ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು (ಅ.13) ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟೆಯವರು ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.














