ಮನೆ ರಾಜಕೀಯ ಬೆಳಗಾವಿ ಅಧಿವೇಶನಕ್ಕೆ ಬಂದು ತಿಕ್ಕಾಟ ನಡೆಸದೇ, ಅಭಿವೃದ್ಧಿ ಬಗ್ಗೆ ಚರ್ಚಿಸಿ: ಆಡಳಿತ, ಪ್ರತಿಪಕ್ಷಗಳಿಗೆ ಸ್ಪೀಕರ್ ಖಾದರ್...

ಬೆಳಗಾವಿ ಅಧಿವೇಶನಕ್ಕೆ ಬಂದು ತಿಕ್ಕಾಟ ನಡೆಸದೇ, ಅಭಿವೃದ್ಧಿ ಬಗ್ಗೆ ಚರ್ಚಿಸಿ: ಆಡಳಿತ, ಪ್ರತಿಪಕ್ಷಗಳಿಗೆ ಸ್ಪೀಕರ್ ಖಾದರ್ ಕಿವಿಮಾತು

0

ಮಂಗಳೂರು: ಡಿಸೆಂಬರ್ 9ರಿಂದ 19ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳು ತಿಕ್ಕಾಟ ನಡೆಸದೇ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

Join Our Whatsapp Group

ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಸರ್ಕಾರ ಮತ್ತು ಪ್ರತಿಪಕ್ಷಗಳು ತಿಕ್ಕಾಟ ನಡೆಸುವುದು ಪ್ರಜಾಪ್ರಭುತ್ವದ ಸೌಂದರ್ಯ. ಅವರಿಗೆ ತಿಕ್ಕಾಟ ನಡೆಸಲು ಡಿಸೆಂಬರ್ 9ರವರೆಗೆ ಸಮಯವಿದೆ. ಅಲ್ಲಿಯವರೆಗೆ ತಿಕ್ಕಾಟ ಮಾಡಿ. ಆದರೆ, ಅಧಿವೇಶನಕ್ಕೆ ಬಂದು ತಿಕ್ಕಾಟ ಮಾಡಬೇಡಿ. ಅಲ್ಲಿ ರಾಜ್ಯದ ಜನರ ಬಗ್ಗೆ, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸಿ. ಈ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಿದರೆ ಉತ್ತರ ಕರ್ನಾಟಕದವರಿಗೆ ಕೊಡುವ ಗೌರವವಾಗುತ್ತದೆ ಎಂದರು.

ಯಾವುದೇ ವಿಷಯಗಳ ಚರ್ಚೆಗೆ ನಿಯಮಾನುಸಾರ ಅವಕಾಶ ಕೊಡುತ್ತೇನೆ. ಆಡಳಿತ ಮತ್ತು ಪ್ರತಿಪಕ್ಷಗಳು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ 10 ದಿನ ಚರ್ಚಿಸಿ. ಅದಕ್ಕೆ ಮುನ್ನ ಮತ್ತು ಬಳಿಕ ತಿಕ್ಕಾಟಗಳಿಗೆ ಸಾಕಷ್ಟು ಸಮಯವಿದೆ ಎಂದು ತಿಳಿಸಿದರು.

ಡಿಸೆಂಬರ್ 9ರಂದು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆ ಮಾಡಲಾಗುವುದು. ಬೆಳಗಾವಿ ವಿಧಾನಸೌಧ ಇರುವುದು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲು. ಉತ್ತರ ಕರ್ನಾಟಕದ ಚರ್ಚೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಾಣದಿಂದ ಬೆಳಗಾವಿ ಅಭಿವೃದ್ಧಿಯಾಗಿದೆ ಎಂದರು.