ಹಾಸ್ಯ ನಟ ನರಸಿಂಹರಾಜು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ತಮ್ಮ ಅಭಿನಯದ ಮೂಲಕ ಅವರು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದಾರೆ. ಸೋಮವಾರ (ಜುಲೈ 24) ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ಅಭಿಮಾನಿಗಳು ಹಾಗೂ ಕುಟುಂಬದವರು ನಿರ್ಧರಿಸಿದ್ದಾರೆ. ಇದಕ್ಕೆ ಈಗಾಗಲೇ ನಾನಾ ರೀತಿಯ ಸಿದ್ಧತೆಗಳು ನಡೆದಿವೆ.
12 ಜನರ ತಂಡ ಎರಡು ಟ್ರಕ್ ಗಳ ಮೂಲಕ ಕರ್ನಾಟಕದ ಮೂವತ್ತೆರಡೂ ಜಿಲ್ಲೆಗಳಿಗೆ ತೆರಳಲಿದೆ. ಅಲ್ಲಿ ಆಯ್ದ ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ. ಟ್ರಕ್ ನಲ್ಲಿರುವ ಎಲ್ ಇಡಿ ಸ್ಕ್ರೀನ್ ನಲ್ಲಿ ನರಸಿಂಹ ರಾಜು ಬಗ್ಗೆ ವಿಡಿಯೋ ತೋರಿಸಲಾಗುತ್ತದೆ. ಅವರ ಬಗ್ಗೆ ಪ್ರಶ್ನೆಗಳನ್ನು ಕೇಳುವ ಕೆಲಸ ಆಗಲಿದೆ. ಈ ಮೂಲಕ ಅವರಿಗೆ ನರಸಿಂಹ ರಾಜು ಅವರನ್ನು ಪರಿಚಯ ಮಾಡಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.
ಹಾಸ್ಯದ ಕುರಿತು ಕಿರಚಿತ್ರೋತ್ಸವ ನಡೆಸಲು ನಿರ್ಧರಿಸಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರೋತ್ಸವ ಆಯೋಜನೆಗೊಳ್ಳಲಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸಮಾರಂಭ ಆಯೋಜನೆಗೊಳ್ಳಲಿದೆ. ಇದರಲ್ಲಿ ಗೆದ್ದವರಿಗೆ ಬಹುಮಾನ ಕೂಡ ವಿತರಣೆ ಮಾಡಲಾಗುತ್ತದೆ. ನರಸಿಂಹ ರಾಜು ಅವರು ನಾಟಕಗಳಲ್ಲೂ ನಟಿಸಿದ್ದರು. ಹೀಗಾಗಿ, ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ನರಸಿಂಹ ರಾಜು ನಟಿಸಿದ ಹಾಸ್ಯ ನಾಟಕಗಳನ್ನು ಆಯೋಜಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಇನ್ನು, ರಾಜ್ಯಾದ್ಯಂತ ಇರುವ ಪ್ರಸಿದ್ಧ ನಾಟಕ ಕಂಪನಿಗಳನ್ನು ಇದರಲ್ಲಿ ಭಾಗಿ ಮಾಡಿಕೊಳ್ಳಲಾಗುತ್ತಿದೆ. ಪ್ರಸಿದ್ಧ ನಾಟಕಗಳನ್ನು ರಾತ್ರಿಯಿಂದ ಮುಂಜಾನೆಯವರೆಗೂ ಆಯೋಜಿಸುವ ಯೋಜನೆ ಇದೆ. ಇನ್ನೂ ಹಲವು ಕಾರ್ಯಕ್ರಮಗಳ ಮೂಲಕ ನರಸಿಂಹರಾಜು ಅವರ ಜನ್ಮ ಶತಮಾನೋತ್ಸನ ಆಚರಿಸಲು ತಯಾರಿ ನಡೆಯುತ್ತಿದೆ. ಜುಲೈ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಚಾಲನೆ ನೀಡಲಿದ್ದಾರೆ.