ಮನೆ ರಾಜ್ಯ ಕಮಿಷನ್ ಪ್ರಮಾಣ ಶೇ. 40 ರಿಂದ ಶೇ. 50  ಏರಿಕೆ: ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ...

ಕಮಿಷನ್ ಪ್ರಮಾಣ ಶೇ. 40 ರಿಂದ ಶೇ. 50  ಏರಿಕೆ: ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ದೂರು

0

ಬೆಂಗಳೂರು(Bengaluru): ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು, ಅದರ ಹಣವನ್ನು ಪಡೆಯಲು ಕಮಿಷನ್‌ ಪ್ರಮಾಣ ಶೇ 40ರಿಂದ ಶೇ 50ರಷ್ಟಾಗಿದೆ  ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ತಿಳಿಸಿದೆ.

ಈ ಕುರಿತು ಮಂಗಳವಾರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್‌ ಹಾಗೂ ಪದಾಧಿಕಾರಿಗಳು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌  ಅವರಿಗೆ ಮನವಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿರುವ ನಮ್ಮ ಗುತ್ತಿಗೆದಾರರಿಗೆ 22 ತಿಂಗಳಿಂದ ಬಿಲ್‌ ಪಾವತಿಯಾಗಿಲ್ಲ. ತಾವು ಹೊಸ–ಹೊಸ ಆದೇಶಗಳನ್ನು ಹೊರಡಿಸಿರುವುದರಿಂದ ಗುತ್ತಿಗೆದಾರರ ಆರೋಪದಂತೆ ಶೇ 40ರ ಕಮಿಷನ್‌ ಶೇ 50ರ ಹಂತಕ್ಕೆ ತಲುಪಿದೆ  ಎಂದು ತಿಳಿಸಿದ್ದಾರೆ.

ತಾವು ಹೊಸ ಹೊಸ ಕಚೇರಿಗಳಿಗೆ ಕಡತಗಳನ್ನು ಪರಿಶೀಲಿಸಲು ಮಂಡಿಸಲು ಆದೇಶಿಸಿದ್ದೀರಿ. ಪ್ರತಿ ಹಂತದಲ್ಲೂ ಸಹಾಯಕ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಕಾರ್ಯಪಾಲಕ ಎಂಜಿನಿಯರ್‌, ಮುಖ್ಯ ಎಂಜಿನಿಯರ್‌ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕಾಮಗಾರಿಗಳು ವೀಕ್ಷಿಸಿ ದೃಢೀಕರಿಸಿರುತ್ತಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿವೀಕ್ಷಿಸಿ, ಅನುಮೋದಿಸಿದ್ದರೂ ಹೆಚ್ಚುವರಿಯಾಗಿ ಬೇರೆ ಬೇರೆ ಕಚೇರಿಯ ಅಧಿಕಾರಿಗಳು ಕಾಮಗಾರಿ ಪರೀಕ್ಷಿಸಲು ಆದೇಶಿಸಿರುವುದರಿಂದ ಗುತ್ತಿಗೆದಾರರಿಗೆ ಕಿರುಕುಳ ಹೆಚ್ಚಾಗುತ್ತಿದೆ  ಎಂದು ಹೇಳಿದ್ದಾರೆ.

ಟಿವಿಸಿಸಿ ವಿಭಾಗ ಮತ್ತು ಗುಣನಿಯಂತ್ರಣ ವಿಭಾಗದಲ್ಲಿ ಅಧಿಕಾರಿಗಳ ಕೊರತೆಯಿಂದ ಕಾಮಗಾರಿಗಳನ್ನು ಪರಿಶೀಲಿಸಲು ತಿಂಗಳಾನುಗಟ್ಟಲೇ ಕಾಯಬೇಕು. ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿ.ಆರ್‌. ನಮೂದಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಕಡತಗಳನ್ನು ಮಂಡಿಸುವ ಕಚೇರಿಗಳ (ಟೇಬಲ್ಸ್‌) ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಕೋರಿಕೊಂಡಿದ್ದಾರೆ.

ಟಿವಿಸಿಸಿ ವಿಭಾಗದವರು ಕಡತವನ್ನು ಪರಿಶೀಲಿಸಿ ಬಿ.ಆರ್‌. ನಮೂದಿಸಲು ಎಲ್ಲ ಗುತ್ತಿಗೆದಾರರಿಗೆ ಅನುವು ಮಾಡಿಕೊಡಬೇಕು  ಎಂದು ಮನವಿ ಮಾಡಿಕೊಂಡಿದ್ದಾರೆ.