ಮನೆ ರಾಜಕೀಯ ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಪಕ್ಷದ ನಿಲುವಿಗೆ ಬದ್ಧ: ಡಿ.ಕೆ. ಶಿವಕುಮಾರ್

ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಪಕ್ಷದ ನಿಲುವಿಗೆ ಬದ್ಧ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು.

ಜಾತಿ ಗಣತಿ ವರದಿ ತಿರಸ್ಕಾರಕ್ಕೆ ನೀವು ಸಹಮತ ವ್ಯಕ್ತಪಡಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,“ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು, ಎಂದು ಅನೇಕ ಸಮುದಾಯಗಳು ಆಗ್ರಹ ಮಾಡಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಪಕ್ಷಬೇಧ ಮರೆತು ಹೋರಾಟ ಮಾಡಲಾಗುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆ” ಎಂದು ಹೇಳಿದರು.

ನೀವು ಕೂಡ ಪತ್ರಕ್ಕೆ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, “ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲಾ ನಾಯಕರಲ್ಲೂ ಇರುತ್ತದೆ” ಎಂದು ತಿಳಿಸಿದರು.

ನಿಗಮ ಮಂಡಳಿ ನೇಮಕ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಹಿರಿಯ ನಾಯಕರು, ಶಾಸಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾನು ಹಾಗೂ ಮುಖ್ಯಮಂತ್ರಿಗಳು ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಿದೆ. 28ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ಸಭೆ ಬಳಿಕ ನಮ್ಮ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸುತ್ತೇವೆ” ಎಂದರು.

ಗೃಹಸಚಿವರು ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಅಸಮಾಧಾನ ಹೊಂದಿದ್ದಾರೆಯೇ ಎಂದು ಕೇಳಿದಾಗ, ಗೃಹಮಂತ್ರಿಗಳು ಮೂರು ದಿನಗಳ ಕಾಲ ಪ್ರವಾಸದಲ್ಲಿದ್ದರು, ಅವರಿಗೆ ಅವರದೇ ಆದ ಕೆಲಸಗಳಿರುತ್ತವೆ. ಸುಮ್ಮನೆ ಯಾರೋ ಹೇಳಿದ್ದನ್ನು ನೀವು (ಮಾಧ್ಯಮಗಳು) ದೊಡ್ಡದಾಗಿ ಬಿಂಬಿಸುತ್ತೀರಿ. ಅವರು ಯಾವ ಕಾರಣಕ್ಕೆ ಅಸಮಾಧಾನಗೊಳ್ಳುತ್ತಾರೆ? ಅಸಮಾಧಾನ ಆಗುವಂತಹದ್ದು ಏನಾಗಿದೆ? ಈ ರೀತಿ ಅಸಮಾಧಾನ ಸೃಷ್ಟಿಸಿ ನಿಮ್ಮ ಘನತೆ ಯಾಕೆ ಹಾಳುಮಾಡಿಕೊಳ್ಳುತ್ತೀರಿ ಎಂದು ಪ್ರತಿಕ್ರಿಯಿಸಿದರು.

ಅವರ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನದ ವಿಚಾರವಾಗಿ ಬೇಸರವಾಗಿದೆ ಎಂದು ಕೇಳಿದಾಗ, ಇಲ್ಲಿ ಅವರ ಬೆಂಬಲಿಗರು, ನನ್ನ ಬೆಂಬಲಿಗರು ಎಂಬುದಿಲ್ಲ. ಎಲ್ಲ ಒಟ್ಟಾಗಿ ಕಾಂಗ್ರೆಸ್ ಬೆಂಬಲಿಗರು. ನನಗೆ, ಸಿಎಂ, ಗೃಹ ಸಚಿವರಿಗೆ ಬೆಂಬಲಿಗರು ಇಲ್ಲ. ಇರುವವರೆಲ್ಲಾ ಕಾಂಗ್ರೆಸ್ ಬೆಂಬಲಿಗರು. ಮಂತ್ರಿಗಿರಿ ಸಿಗದ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.