ಮನೆ ಕ್ರೀಡೆ ಕಾಮನ್‌ ವೆಲ್ತ್‌ ಗೇಮ್ಸ್‌ : 200 ಮೀ. ಓಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಹಿಮಾ ದಾಸ್‌

ಕಾಮನ್‌ ವೆಲ್ತ್‌ ಗೇಮ್ಸ್‌ : 200 ಮೀ. ಓಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಹಿಮಾ ದಾಸ್‌

0
https://www.youtube.com/channel/UCmDoYGj_oDaxpT_t7Pa9iEQ

ಬರ್ಮಿಂಗ್‌ಹ್ಯಾಮ್ (Birmingham): ಬರ್ಮಿಂಗ್‌ ಹ್ಯಾಮ್‌ ನಲ್ಲಿ ನಡೆಯುತ್ತಿರುವ ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಭಾರತದ ಹಿಮಾ ದಾಸ್‌ ಅವರು ಮಹಿಳೆಯರ 200 ಮೀ. ಓಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಇಂದು ನಡೆದ ಹೀಟ್ಸ್‌ನಲ್ಲಿ 23.42 ಸೆಕೆಂಡ್‌ ಗಳಲ್ಲಿ ಗುರಿ ತಲುಪಿದರು. ಐವರು ಸ್ಪರ್ಧಿಗಳು ಪಾಲ್ಗೊಂಡಿದ್ದ ಎರಡನೇ ಹೀಟ್‌ನಲ್ಲಿ (ಅರ್ಹತಾ ಹಂತ) ಓಡಿದ ಹಿಮಾ ಮೊದಲನೆಯವರಾಗಿ ಗುರಿ ತಲುಪಿದರು. ಒಟ್ಟು ಆರು ಹೀಟ್ಸ್‌ ನಡೆದವು. ಅಗ್ರ 16 ಅಥ್ಲೀಟ್‌ಗಳು ಸೆಮಿ ಫೈನಲ್ ಪ್ರವೇಶಿಸಿದರು. ‌

ಮೊದಲ ಹೀಟ್‌ನಲ್ಲಿದ್ದ ನೈಜೀರಿಯದ ಫೇವರ್‌ ಒಫಿಲಿ (22.71 ಸೆ.) ಮತ್ತು ಜಮೈಕದ ಎಲೈನ್‌ ಥಾಂಪ್ಸನ್‌ ಹೆರಾ (22.80 ಸೆ.) ಅವರು ಒಳಗೊಂಡಂತೆ ಆರು ಅಥ್ಲೀಟ್‌ಗಳು ಹಿಮಾ ಅವರಿಗಿಂತ ಉತ್ತಮ ಸಮಯ ಕಂಡುಕೊಂಡರು.

ಹೈಜಂಪ್‌ನಲ್ಲಿ ಭಾರತದ ತೇಜಸ್ವಿನ್‌ ಶಂಕರ್‌ ಗೆ ಕಂಚು:

ಭಾರತ ಅಥ್ಲೆಟಿಕ್ಸ್‌ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಸ್ಥಾನ ಪಡೆದಿದ್ದ ಹೈಜಂಪ್ ಸ್ಪರ್ಧಿ ತೇಜಸ್ವಿನ್‌ ಶಂಕರ್‌ ಅವರು ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಅವರು 2.22 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಕಾಮನ್‌ವೆಲ್ತ್‌ ಕೂಟದ ಹೈಜಂಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವ ಅವರಿಗೆ ಒಲಿಯಿತು.

1970ರ ಎಡಿನ್‌ಬರೋ ಕೂಟದಲ್ಲಿ ಭೀಮ್‌ ಸಿಂಗ್‌ ಅವರು 2.06 ಮೀ. ಎತ್ತರ ಜಿಗಿದದ್ದು, ಭಾರತದ ಅಥ್ಲೀಟ್‌ವೊಬ್ಬರ ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿತ್ತು.

23 ವರ್ಷದ ಶಂಕರ್‌ ಮೊದಲ ಎರಡು ಅವಕಾಶಗಳಲ್ಲಿ 2.25 ಮೀ. ಜಿಗಿಯಲು ವಿಫಲರಾದರು. ಬೆಳ್ಳಿ ಗೆಲ್ಲುವ ಗುರಿಯೊಂದಿಗೆ ಕೊನೆಯ ಪ್ರಯತ್ನದಲ್ಲಿ ಅವರು 2.28 ಮೀ. ಎತ್ತರ ಜಿಗಿಯಲು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ.

ಬಹಾಮಸ್‌ನ ಡೊನಾಲ್ಡ್‌ ಥಾಮಸ್‌ ಮತ್ತು ಇಂಗ್ಲೆಂಡ್‌ನ ಜೊಯೆಲ್ ಕ್ಲಾರ್ಕ್‌ ಅವರೂ 2.22 ಮೀ. ಸಾಧನೆ ಮಾಡಿದ್ದರು. ಆದರೆ ಇವರಿಬ್ಬರು ತಮ್ಮ ಎರಡನೇ ಪ್ರಯತ್ನದಲ್ಲಿ ಯಶ ಕಂಡರೆ, ಶಂಕರ್‌ ಮೊದಲ ಪ್ರಯತ್ನದಲ್ಲೇ ಈ ಎತ್ತರ ಜಿಗಿದರು. ‘ಕೌಂಟ್‌ ಬ್ಯಾಕ್‌’ನಲ್ಲಿ ಕಂಚು ಭಾರತದ ಅಥ್ಲೀಟ್‌ ಪಾಲಾಯಿತು.

ನ್ಯೂಜಿಲೆಂಡ್‌ನ ಹಾಮಿಷ್‌ ಕೆರ್‌ ಮತ್ತು ಆಸ್ಟ್ರೇಲಿಯಾದ ಬ್ರೆಂಡನ್‌ ಸ್ಟಾರ್ಕ್‌ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು. ಇಬ್ಬರೂ 2.25 ಮೀ. ಜಿಗಿದರು. ಆದರೆ ‘ಕೌಂಟ್‌ಬ್ಯಾಕ್‌’ನಲ್ಲಿ ಚಿನ್ನ ಹಾಮಿಷ್‌ ಪಾಲಾಯಿತು.

ಮಹಿಳೆಯರ ಷಾಟ್‌ಪಟ್‌ ಸ್ಪರ್ಧೆಯಲ್ಲಿ ಭಾರತದ ಮನ್‌ಪ್ರೀತ್‌ ಕೌರ್‌ ಅವರು 15.69 ಮೀ. ಸಾಧನೆಯೊಂದಿಗೆ 12ನೇ ಹಾಗೂ ಕೊನೆಯ ಸ್ಥಾನ ಪಡೆದರು.