ಬರ್ಮಿಂಗ್ ಹ್ಯಾಮ್ (Birmingham): ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, ನಾಲ್ಕನೇ ದಿನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಎಲ್.ಸುಶೀಲಾ ದೇವಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಮಣಿಪುರದ 27 ವರ್ಷದ ಸುಶೀಲಾ ದೇವಿ ಅವರು ಚಿನ್ನದ ಪದಕಕ್ಕಾಗಿ ಸೋಮವಾರ ರಾತ್ರಿ ನಡೆದ ಜೂಡೋ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋತಿದ್ದಾರೆ. ಈ ಮೂಲಕ ಸುಶೀಲಾ ದೇವಿ ಅವರು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಮಣಿಪುರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಸುಶೀಲಾ ದೇವಿ ಇದಕ್ಕೂ ಮೊದಲು ಮಲಾವಿಯ ಹ್ಯಾರಿಯೆಟ್ ಬೋನ್‌ಫೇಸ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಸೆಮಿ ಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು ಸೋಲಿಸಿ ಫೈನಲಿಗೆ ತಲುಪಿದ್ದರು. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದರು.
ಸುಶೀಲಾ ದೇವಿ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು ಸಹಿತ ಏಳು ಪದಕಗಳನ್ನು ಪಡೆದುಕೊಂಡಿದೆ.