ಯಾದಗಿರಿ: ಕೋಮು ಪ್ರಚೋದನೆ ಭಾಷಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದ ಆರೋಪದ ಮೇಲೆ 2015ರಲ್ಲಿ ಆಂದೋಲಾ ಶ್ರೀ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮಾರ್ಚ್ 17) ಯಾದಗಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಹೊನೋಲೆ ಅವರು, ಸಿದ್ದಲಿಂಗ ಸ್ವಾಮಿಯನ್ನು ದೋಷಿ ಎಂದು ತೀರ್ಪು ನೀಡಿದರು.
ಅಲ್ಲದೇ ದೋಷಿಯ ಹಿನ್ನಲೆಯ ವರದಿ ನೀಡುವಂತೆ ಪ್ರೊಬೇಷನರಿ ಅಧಿಕಾರಿಗಳಿಗೆ ತಿಳಿಸಿದ್ದು, ವರದಿ ಮೇಲೆ ಶಿಕ್ಷೆಯ ಪ್ರಮಾಣ ನಿರ್ಧಾರವಾಗಲಿದೆ.
2015ರ ಜನವರಿ 2ರಂದು ಯಾದಗಿರಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಕೋಮು ಪ್ರಚೋದನೆ ಭಾಷಣ ಮಾಡಿದ್ದರು. ಈ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಾಗಿಸಿಕೊಂಡಿದ್ದ ಯಾದಗಿರಿ ನಗರ ಠಾಣೆ ಪೊಲೀಸರು ಐಪಿಸಿ ಕಲಂ 153 (ಎ), 295ರ ಅಡಿಯಲ್ಲಿ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.