ತಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸಬಹುದು ಎಂದು ಮಲಯಾಳಂ ನಟಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಲಪಂಥೀಯ ಚಿಂತಕ ರಾಹುಲ್ ಈಶ್ವರ್ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ವಾರ, ಇದೇ ನಟಿ ಚೆಮ್ಮನೂರು ಜ್ಯೂಯಲರ್ಸ್ ಮಾಲೀಕ ಬಾಬಿ ಚೆಮ್ಮನೂರು ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಬಿ ಬಂಧನಕ್ಕೊಳಗಾಗಿದ್ದರು. ವಿಚಾರಣಾ ನ್ಯಾಯಾಲಯದಿಂದ ಜಾಮೀನು ಪಡೆಯುವ ಅವರ ಮೊದಲ ಯತ್ನ ವಿಫಲವಾಗಿತ್ತು. ಜಾಮೀನು ಕೋರಿ ಅವರು ಸಲ್ಲಿಸಿದ ಹೊಸ ಮನನವಿ ಕೇರಳ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.
ಈ ಮಧ್ಯೆ ತೀವ್ರ ಸಂಚಲನ ಮೂಡಿಸಿದ್ದ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ರಾಹುಲ್ ಈಶ್ವರ್ ನಟಿ ಆಯ್ಕೆ ಮಾಡಿಕೊಳ್ಳುವ ಉಡುಗೆಗಳ ಬಗ್ಗೆ ಹೇಳಿಕೆ ನೀಡಿದ್ದರು.
ಅವರ ಹೇಳಿಕೆಯಿಂದ ತಾನು ಹಾಗೂ ತನ್ನ ಕುಟುಂಬ ಮಾನಸಿಕ ಸಂಕಟ ಅನುಭವಿಸುತ್ತಿರುವುದಾಗಿಯೂ ಈಶ್ವರ್ ವಿರುದ್ಧ ದೂರು ನೀಡುವುದಾಗಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಎಚ್ಚರಿಕೆ ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ಈಶ್ವರ್ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ತನ್ನ ಟೀಕೆ ರಚನಾತ್ಮಕವಾದುದು. ಈ ವಿಚಾರದಲ್ಲಿ ತ ಅಭಿಪ್ರಾಯ ವ್ಯಕ್ತಪಡಿಸಲು ತನಗೆ ಸಂಪೂರ್ಣ ಹಕ್ಕಿದೆ. ದೂರುದಾರೆಯನ್ನು ನಿಂದಿಸುವ ಯಾವುದೇ ಉದ್ದೇಶ ತನಗೆ ಇಲ್ಲ. ಅಲ್ಲದೆ ತಾನು ಚೆಮ್ಮನೂರ್ ಅವರು ಎಸಗಿದ್ದಾರೆ ಎನ್ನಲಾದ ಕೃತ್ಯವನ್ನು ಸಮರ್ಥಿಸಿಕೊಂಡಿಲ್ಲ ಅಥವಾ ಯಾವುದೇ ರೀತಿಯಲ್ಲಿ ನಟಿಯ ಮಾನಹಾನಿಗೆ ಯತ್ನಿಸಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.