ಮೈಸೂರು: ಮೈಸೂರಿನ ಪಶ್ಚಿಮ ಆರ್ ಟಿಓ ಕಚೇರಿಯಲ್ಲಿ ಅನಧಿಕೃತ ನೌಕರರು ಕೆಲಸ ಮಾಡುತ್ತಿದ್ದು, ಈ ಕುರಿತು ಸಾಕ್ಷ್ಯಾಧಾರ ಕಲೆ ಹಾಕಿ, ಅಲ್ಲಿಯೇ ಕೆಲಸ ಮಾಡುತ್ತಿರುವ ನೌಕರರಿಂದ ಮತ್ತು ಏಜೆಂಟ್ ಗಳಿಂದ ಮಾಹಿತಿ ಪಡೆದು ಬಳಿಕ ಅನಧಿಕೃತ ನೌಕರರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 31/2023 ನಂಬರ್ ನಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಸವಾಲ್ ವಾಹಿನಿ ಸಂಪಾದಕ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ನ್ಯೂಸ್ ಫಸ್ಟ್ ವಾಹಿನಿಗೆ ಈ ಕುರಿತು ಸಂದರ್ಶನ ನೀಡಿರುವ ಪ್ರದೀಪ್ ಕುಮಾರ್ , ಎಫ್ ಐ ಆರ್ ಆದವರಲ್ಲಿ 10 ಮಂದಿ ಸರ್ಕಾರಿ ನೌಕರರಾಗಿದ್ದು, 25 ಮಂದಿ ಅನಧಿಕೃತ ನೌಕರರಿದ್ದಾರೆ.
ಇದಲ್ಲದೇ ಇನ್ನೂ 8 ಮಂದಿ ಅನಧಿಕೃತ ನೌಕರರಿದ್ದಾರೆ. ಅವರಿಗೆ ಸಹಾಯಕರಾಗಿ ಇನ್ನಿಬ್ಬರು ಸರ್ಕಾರಿ ನೌಕರರ ಹೆಸರು ಸದ್ಯದಲ್ಲೇ ದೂರಿನಲ್ಲಿ ಸೇರ್ಪಡೆಗೊಳ್ಳಲಿದೆ.
ಸಾಕ್ಷ್ಯಾಧಾರವಿರುವವರ ವಿರುದ್ಧ ದೂರು ನೀಡಿದ್ದು, ಸಾಕ್ಷ್ಯಾಧಾರ ಕೊರತೆ ಇರುವ ಕೆಲ ವ್ಯಕ್ತಿಗಳ ಮೇಲೆ ಎಫ್ ಐ ಆರ್ ದಾಖಲಿಸಿಲ್ಲ. ಎಫ್ ಐ ಆರ್ ನಲ್ಲಿ ಸೂಪರಿಡೆಂಟ್ ಕುಮಾರ್ ಹಾಗೂ ಮಂಜುನಾಥ್ ಎಂಬ ಇಬ್ಬರು ವ್ಯಕ್ತಿಯ ಹೆಸರನ್ನು ಕಣ್ತಪ್ಪಿನಿಂದ ಕೈ ಬಿಡಲಾಗಿತ್ತು. ಈಗ ಅವರ ಹೆಸರನ್ನು ಸೇರಿಸಲಾಗಿದೆ ಎಂದರು.
ಎಫ್ ಐ ಆರ್ ನಲ್ಲಿ ಮುಖ್ಯ ಆರೋಪಿ ಜಂಟಿ ಸಾರಿಗೆ ಆಯುಕ್ತ ಸಿ.ಟಿ.ಮೂರ್ತಿ. ಇವರು ಮೈಸೂರಿಗೆ ವರ್ಗಾವಣೆಯಾಗಿ ಬಂದು 9-10 ವರ್ಷಗಳಾಗಿದ್ದು, ಇದಕ್ಕೂ ಮುನ್ನ ಮಂಡ್ಯದಲ್ಲಿ ಆರ್ ಟಿ ಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಡೆಪ್ಯೂಟಿ ಕಮೀಷನರ್ ಆಫ್ ಟ್ರಾನ್ಸ್ ಪೋರ್ಟ್ ಆಗಿ ಮೈಸೂರಿಗೆ ಆಗಮಿಸಿದ್ದು, ಆ ಹುದ್ದೆಯನ್ನು ತೆಗೆದ ನಂತರ ಜಂಟಿ ಸಾರಿಗೆ ಆಯುಕ್ತರಾಗಿ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅನಧಿಕೃತ ನೌಕರರು ನಿಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಜಂಟಿ ಸಾರಿಗೆ ಆಯುಕ್ತರಿಗೆ ಒಂದೂವರೆ ತಿಂಗಳ ಮುಂಚೆಯೇ ಎರಡು ಬಾರಿ ದೂರು ನೀಡಿದ್ದು, ಅದಕ್ಕೆ ಪ್ರತಿಕ್ರಿಯಿಸದೇ, ಮೂರನೇ ಬಾರಿ ದೂರು ನೀಡಿದಾಗ ತಮ್ಮ ಇಲಾಖೆಯ ಮುಖ್ಯ ಕಚೇರಿಗೆ ದೂರನ್ನು ಪರಿಶೀಲಿಸುವಂತೆ ಕಳಿಸುತ್ತಾರೆ. ಆದರೆ ಅವರ ಕಛೇರಿಯಲ್ಲಿಯೇ ಅನಧಿಕೃತ ನೌಕರರು ಕೆಲಸ ಮಾಡುತ್ತಿದ್ದರೂ ಅವರು ಪ್ರಶ್ನಿಸಿಲ್ಲ ಎಂದು ಆರೋಪಿಸಿದರು.
ಎಫ್ ಐ ಆರ್ ನಲ್ಲಿ ಆರೋಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ, ಲತಾಮಣಿ, ಚನ್ನವೀರಪ್ಪ, ಹರೀಶ್ ಎಂದು ಇಬ್ಬರಿದ್ದು, ಓರ್ವ ಡಿಎಲ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದು, ಮತ್ತೋರ್ವ ಕ್ಯಾಶ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚನ್ನವೀರಪ್ಪ ಅವರ ಮನೆ ಮೇಲೆ ಈಗಾಗಲೇ ಎಸಿಬಿ ರೈಡ್ ಆಗಿದ್ದು, ಈಗ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆರ್ ಟಿಓ ಕಚೇರಿಯ ಅವ್ಯವಹಾರಗಳಿಗೆ ಉದಾಹರಣೆಗಳು
6 ತಿಂಗಳ ಹಿಂದೆ ಓರ್ವ ಮಹಿಳೆಯ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದು, ಆಕೆ ಇನ್ಶೂರೆನ್ಸ್ ಕ್ಲೈಮ್ ಮಾಡಲು ಹೋದಾಗ ಆರ್ ಸಿ ಪುಸ್ತಕ ತೆಗೆದುಕೊಂಡು ಹೋಗುತ್ತಾಳೆ. ಆಗ ಆರ್ ಟಿಓ ಅಧಿಕಾರಿಗಳು, ಈ ವಾಹನ ನಿಮ್ಮ ಪತಿಯ ಹೆಸರಿನಲ್ಲಿಲ್ಲ ಎಂದು ಹೇಳುತ್ತಾರೆ. ಆದರೆ ವಾಹನ ಹಾಗೂ ಮೂಲ ಆರ್ ಸಿ ಪುಸ್ತಕ ಆ ಮಹಿಳೆಯ ಬಳಿ ಇರುತ್ತದೆ. ಈ ಕುರಿತು ಪರಿಶೀಲನೆ ನಡೆಸಿದಾಗ ಆರ್ ಸಿ ಬೇರೆಯವರ ಹೆಸರಿಗೆ ಬದಲಾಗಿರುತ್ತದೆ.
ಮತ್ತೊಂದು ಪ್ರಕರಣದಲ್ಲಿ ಟ್ರ್ಯಾಕ್ಟರ್ ಖರೀದಿಸುವಾಗ ವ್ಯವಸಾಯ ದೃಢೀಕರಣ ಪತ್ರ ಕೊಡಬೇಕಾಗಿರುತ್ತದೆ. ಆದರೆ ಇದೇ ವ್ಯವಸಾಯ ದೃಢೀಕರಣ ಪತ್ರ ಇಟ್ಟುಕೊಂಡು ಆತನಿಗೆ ಗೊತ್ತಿಲ್ಲದಂತೆ 30-40 ಮಂದಿಗೆ ಟ್ರ್ಯಾಕ್ಟರ್ ರಿಜಿಸ್ಟರ್ ಮಾಡಿರುತ್ತಾರೆ. ಆತನಿಗೆ ನೋಟೀಸ್ ಹೋದಾಗ ಆತ ಬಂದು ಜಗಳ ಮಾಡುತ್ತಾನೆ. ಆಗಲೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿಸಿದರು.
ಈ ಕುರಿತು ನಾನು ಕೆಲವರಿಂದ ಮಾಹಿತಿ ಪಡೆದು ಅಧಿಕೃತ ಹಾಗೂ ಅನಧಿಕೃತ ನೌಕರರ ಮಾಹಿತಿ ನೀಡುವಂತೆ ಆರ್ ಟಿಓ ಕಚೇರಿಗೆ ಆರ್ ಟಿಐ ನಲ್ಲಿ ಅರ್ಜಿ ಹಾಕುತ್ತೇನೆ. ಅನಧಿಕೃತ ನೌಕರರು ಯಾರು ಇಲ್ಲ ಎಂದು ಮಾಹಿತಿ ನೀಡುತ್ತಾರೆ. ಗುತ್ತಿಗೆ ನೌಕರರ ಮಾಹಿತಿ ಕೇಳಿದಾಗ ರೋಸ್ ಮಠ ಎಂಬ ಕಂಪನಿಗೆ ಗುತ್ತಿಗೆ ನೀಡಿದ್ದೇವೆ. ಕೆಲವು ವ್ಯಕ್ತಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಕ್ತಿಗಳ ಮಾಹಿತಿ ನೀಡುತ್ತಾರೆ. ಆ ಪಟ್ಟಿಯಲ್ಲಿ ಈಗ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಹೆಸರು ಇರುವುದಿಲ್ಲ. ಬದಲಿಗೆ ಈ ಹಿಂದೆ ಕೆಲಸ ಮಾಡಿದ ವ್ಯಕ್ತಿಗಳ ಮಾಹಿತಿ ಇರುತ್ತದೆ. ಈ ಹಿಂದೆ ಉಮಾ ಶಂಕರ್ ಎಂಬ ವ್ಯಕ್ತಿ ಅನಧಿಕೃತ ನೌಕರನಾಗಿ ಕೆಲಸ ಮಾಡುತ್ತಿದ್ದು, ತದ ನಂತರ ಆರ್ ಟಿಓ ಅಧಿಕಾರಿಗಳು ಆತನನ್ನು ರೋಸ್ ಮಠ ಕಂಪನಿಗೆ ಗುತ್ತಿಗೆ ನೌಕರನಾಗಿ ಹೆಸರು ಸೇರಿಸಿದ್ದರು ಎಂದು ಆಪಾದಿಸಿದರು.
ಪ್ರಸ್ತುತ ಕೆಲಸ ಮಾಡುತ್ತಿದ್ದ ಅನಧಿಕೃತ ನೌಕರರು ಕ್ಯಾಶ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಸರ್ಕಾರಿ ಕಡತಗಳನ್ನು ಅವರೇ ಬರೆಯುತ್ತಾರೆ. ಷರಾಗಳನ್ನು ಅವರೇ ಬರೆಯುತ್ತಾರೆ. ಅದಕ್ಕೆ ಸಾಕಷ್ಟು ವಿಡಿಯೋಗಳಿದೆ. ಸಿಸಿಟಿವಿ ಫೋಟೆಜ್ ಗಳನ್ನು ಪರಿಶೀಲಿಸಿದರೆ ಅದರಲ್ಲಿಯೇ ಮಾಹಿತಿ ದೊರೆಯುತ್ತದೆ. ಮೇಲಾಧಿಕಾರಿಗಳ ಸಹಕಾರವಿಲ್ಲದೇ ಯಾವುದೇ ವ್ಯಕ್ತಿ ಕಚೇರಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ನಿಮಗೆ ಹೇಗೆ ಗೊತ್ತಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಓರ್ವ ವ್ಯಕ್ತಿ ಬೆಂಗಳೂರಿನಿಂದ ಬಂದಿದ್ದೇನೆ. ನನಗೆ ಮೈಸೂರಿನಲ್ಲಿ ಡಿಎಲ್ ನವೀಕರಣ ಮಾಡಿಕೊಡಿ ಎಂದು ಆರ್ ಟಿಓ ಕಚೇರಿಯಲ್ಲಿ ಕೇಳಿದಾಗ 25 ಸಾವಿರ ರೂ. ಲಂಚಕ್ಕೆ ಹೋಮ್ ಗಾರ್ಡ್ ಡ್ರೆಸ್ ನಲ್ಲಿದ್ದ ವ್ಯಕ್ತಿ ಬೇಡಿಕೆ ಇಡುತ್ತಾನೆ. ಇದನ್ನೂ ಗಮನಿಸಿದ ವ್ಯಕ್ತಿ(ಏಜೆಂಟ್) ನಾನು ಕಮ್ಮಿಗೆ ಮಾಡಿಸಿಕೊಡುತ್ತೇನೆಂದು ಕರೆದುಕೊಂಡು ಹೋಗುತ್ತಾನೆ. ಆಗ ಇಬ್ಬರ ನಡುವೆ ಜಗಳವಾಗುತ್ತದೆ. ಆಗ ಹೋಮ್ ಗಾರ್ಡ್ ಬಳಿ ಪ್ರಶ್ನೆ ಮಾಡಿದಾಗ, ನಾನು ಅಧಿಕೃತ ನೌಕರ ಅಲ್ಲ. ಹೋಮ್ ಗಾರ್ಡ್ ಸಮವಸ್ತ್ರ ಧರಿಸಿ ಕಚೇರಿಯ ಒಳಗೆ ಹೋಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ. ಆದರೆ ಹೋಮ್ ಗಾರ್ಡ್ ನೌಕರರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡುತ್ತಿರುತ್ತಾರೆ ಎಂದು ತಿಳಿಸಿದರು.
ನಾನು ಮಾಡುತ್ತಿರುವ ಆರೋಪಗಳಿಗೆ ತಕ್ಕಂತೆ ನನ್ನ ಬಳಿ ದಾಖಲೆ ಇದೆ. ಅನಧಿಕೃತ ನೌಕರರು ಕಡತಗಳಲ್ಲಿ ಸಹಿ ಹಾಕಿರುವುದು, ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವ ದಾಖಲೆ ಇದೆ. ಮೂರು ಸಂಘಟನೆಗಳು ಸೇರಿ ಕೆಲಸ ಮಾಡಿದ್ದು, ಆರ್ ಟಿ ಓ ನೌಕರರು ಆ ಸಂಘಟನೆಗಳಿಗೆ ಹೆದರಿಸಿದ ಪರಿಣಾಮ ಅವರು ಹಿಂದೆ ಸರಿದಿದ್ದು, ಅವರ ಬಳಿ ಕೆಲವು ದಾಖಲೆಗಳನ್ನು ನಾನು ಪಡೆದು, ನಂತರ ನಾನು ದಾಖಲೆ, ಸಾಕ್ಷ್ಯಗಳನ್ನು ಸಂಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿದರು.