ತೆಲುಗು ಚಿತ್ರರಂಗದ ಖ್ಯಾತ ನಟ ಸುಪ್ರೀತ್ ರೆಡ್ಡಿ ವಿರುದ್ಧ ಹಲ್ಲೆ ಸೇರಿದಂತೆ ಹಲವು ಆರೋಪಗಳಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಆರಂಭವಾಗಿದೆ. ಸಿನಿಮಾಗಳಲ್ಲಿ ಖಳನಾಯಕ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಅವರು ಇದೀಗ ನೈಜ ಜೀವನದಲ್ಲಿನ ವರ್ತನೆಯ ಆರೋಪದಿಂದ ಸುದ್ದಿಯಲ್ಲಿದ್ದಾರೆ.
ಮೇಡ್ಚಲ್ ಜಿಲ್ಲೆಯ ಕೀಸರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಾರಂ ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಊಬರ್ ಕ್ಯಾಬ್ ಚಾಲಕರಾಗಿರುವ ಶ್ರೀಹರಿ ಎಂಬವರು ನಾಗಾರಂ ಚೌರಸ್ತಾ ಬಳಿ ಒಂದು ಟ್ರಿಪ್ ಮುಗಿಸಿ, ಮುಂದಿನ ಬುಕಿಂಗ್ ನಿರೀಕ್ಷೆಯಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿಕೊಂಡಿದ್ದರು.

ಅದೇ ವೇಳೆ ನಟ ಸುಪ್ರೀತ್ ರೆಡ್ಡಿ ತಮ್ಮ ಫಾರ್ಚೂನರ್ ಕಾರಿನಲ್ಲಿ ಅಲ್ಲಿಗೆ ಬಂದಿದ್ದು, ಕ್ಯಾಬ್ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಕಾರಿನಿಂದ ಇಳಿದು ಚಾಲಕನೊಂದಿಗೆ ವಾಗ್ವಾದ ನಡೆಸಿದ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚಾಲಕ ಶ್ರೀಹರಿ ಘಟನೆ ಬಳಿಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೀಸರ ಪೊಲೀಸರು ಪರಿಶೀಲನೆ ನಡೆಸಿ ವಿವರಗಳನ್ನು ಸಂಗ್ರಹಿಸಿದ್ದಾರೆ.
ಸಂತ್ರಸ್ತನ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಸುಪ್ರೀತ್ ರೆಡ್ಡಿ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಲಭ್ಯವಾಗಿರುವ ಸಾಕ್ಷ್ಯಗಳ ಆಧಾರದಲ್ಲಿ ನಟರಿಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
‘ಕಾಟ್ರಾಜು’ ಪಾತ್ರದಿಂದ ಜನಪ್ರಿಯತೆ
2002ರಲ್ಲಿ ಬಿಡುಗಡೆಯಾದ ‘ಜಯಂ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ್ದ ಸುಪ್ರೀತ್ ರೆಡ್ಡಿ, ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಛತ್ರಪತಿ ಚಿತ್ರದಲ್ಲಿನ ‘ಕಾಟ್ರಾಜು’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.

ಇದಕ್ಕೂ ಮುನ್ನ ಸೈ ಹಾಗೂ ಮರ್ಯಾದ ರಾಮಣ್ಣ ಚಿತ್ರಗಳಲ್ಲಿಯೂ ಖಳನಾಯಕನಾಗಿ ಗಮನ ಸೆಳೆದಿದ್ದರು. ಜೊತೆಗೆ ಮಿರ್ಚಿ, ದೂಕುಡು ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.
ತೆಲುಗು ಮಾತ್ರವಲ್ಲದೆ ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ಅಭಿನಯಿಸಿರುವ ಸುಪ್ರೀತ್ ರೆಡ್ಡಿ, ಇದೀಗ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಕಾನೂನು ತನಿಖೆ ಎದುರಿಸುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.














