ನವದೆಹಲಿ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ ಕಳೆದೊಂದು ದಶಕದಲ್ಲಿ ಸೇವೆಯಲ್ಲಿರುವ ನ್ಯಾಯಾಧೀಶರ ವಿರುದ್ಧ ಒಟ್ಟು 8,630 ದೂರುಗಳು ದಾಖಲಾಗಿವೆ ಎಂದು ಕೇಂದ್ರ ಕಾನೂನು ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿದೆ. ಡಿಎಂಕೆ ಪಕ್ಷದ ಸಂಸದ ಮಥೇಸ್ವರನ್ ವಿಎಸ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಸುಪ್ರೀಂ ಕೋರ್ಟ್‌ನಿಂದ ಪಡೆದ ಮಾಹಿತಿಯ ಆಧಾರದಲ್ಲಿ ಈ ಸಂಖ್ಯೆಯನ್ನು ಬಹಿರಂಗಪಡಿಸಿದ್ದಾರೆ
ಈ ದೂರುಗಳು ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ ಅಥವಾ ಇತರ ಗಂಭೀರ ಅನೈತಿಕತೆ ಸಂಬಂಧಿಸಿದ್ದಾಗಿರಬಹುದು ಎಂದು ಪ್ರಶ್ನೆಯಲ್ಲಿ ಉಲ್ಲೇಖಿಸಲಾಗಿತ್ತು. ಸರ್ಕಾರದ ಪ್ರಕಾರ, ಉನ್ನತ ನ್ಯಾಯಾಂಗದ ವಿರುದ್ಧ ಬರುವ ದೂರುಗಳನ್ನು ಇನ್-ಹೌಸ್ ಪ್ರಕ್ರಿಯೆಯಡಿ ನಿರ್ವಹಿಸಲಾಗುತ್ತದೆ. ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧದ ದೂರುಗಳನ್ನು ಸ್ವೀಕರಿಸಲು ಸಬಲರಾಗಿದ್ದು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಕೋರ್ಟ್‌ನ ನ್ಯಾಯಾಧೀಶರ ವಿರುದ್ಧದ ದೂರುಗಳನ್ನು ಪರಿಶೀಲಿಸುತ್ತಾರೆ.
ಸಿಪಿಜಿಆರ್‌ಎಎಂಎಸ್ ಅಥವಾ ಇತರ ಮೂಲಗಳ ಮೂಲಕ ಬರುವ ದೂರುಗಳನ್ನು ಸಂಬಂಧಪಟ್ಟ ಮುಖ್ಯ ನ್ಯಾಯಮೂರ್ತಿಗಳಿಗೆ ರವಾನಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಆದರೆ, ಈ ದೂರುಗಳ ಪಟ್ಟಿ ಅವುಗಳ ವಿವರಗಳು ಅಥವಾ ಅದರ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ದೂರುಗಳ ದಾಖಲಾತಿ, ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ವ್ಯವಸ್ಥಿತ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆಯೂ ಉತ್ತರದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.















