ರಾಯಚೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೇರೆ ಯಾವುದೋ ಉದ್ದೇಶಕ್ಕೆ ರಾಜಕಾರಣ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ, ಉತ್ತರವನ್ನು ಸದನದಲ್ಲಿ ಸಚಿವರು ನೀಡಿದ್ದಾರೆ. ಒಂದು ವೇಳೆ ವಿಶೇಷ ಮಾಹಿತಿ ಇದ್ದರೆ ಪೊಲೀಸರು ತನಿಖೆ ಮಾಡುತ್ತಾರೆ ಎಂದರು.
6 ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಿರುವುದಾಗಿ ಆರೋಪಿಸಿ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಚಿವರ ವಿರುದ್ಧ ಕ್ರಮ ಕೈಗೊಳ್ಳಲಿದ್ದರೆ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಪತ್ರವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದಾರೆ. ಸರ್ಕಾರ ಮುಖ್ಯಕಾರ್ಯದರ್ಶಿ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಪ್ರದೀಪ್ ಸೂಚಿಸಿದ್ದಾರೆ.
ವಿಜಯ ರಾಘವೇಂದ್ರ ಕುಟುಂಬಕ್ಕೆ ಸಾಂತ್ವಾನ
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂಧನಾ ನಿಧನ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ವಿಜಯ ರಾಘವೇಂದ್ರ ಪತ್ನಿ ಅವರಿಗೆ ಬಹಳ ಚಿಕ್ಕ ವಯಸ್ಸು. ನನಗೆ ಅವರ ಪರಿಚಯವಿದೆ. ವಿಜಯರಾಘವೇಂದ್ರ ಅವರ ಪರಿಚಯ ಕೂಡ ಇದೆ. ಸ್ಪಂದನಾ ಅವರ ತಂದೆ ಶಿವರಾಂ ನಮ್ಮ ಪಕ್ಷದ ಮುಖಂಡರು. ಸ್ಪಂದನಾ ಅವರ ನಿಧನ ದುಃಖಕರವಾಗಿದೆ. ಈ ಚಿಕ್ಕವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಳ್ಳುವಂತದ್ದು ಆಶ್ಚರ್ಯ ಆಗಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಭಗವಂತ ಅವರಿಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದರು.