ಮನೆ ರಾಜಕೀಯ ಮಾ.26 ರಂದು ಪಂಚರತ್ನ ಯಾತ್ರೆಯ ಸಮಾರೋಪ: ಎಚ್.ಡಿ.ಕುಮಾರಸ್ವಾಮಿ

ಮಾ.26 ರಂದು ಪಂಚರತ್ನ ಯಾತ್ರೆಯ ಸಮಾರೋಪ: ಎಚ್.ಡಿ.ಕುಮಾರಸ್ವಾಮಿ

0

ಮೈಸೂರು: ಇದೇ 26ರಂದು ಭಾನುವಾರ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ನಡೆಯಲಿದೆ. ಸಮಾರೋಪದ ಮೂಲಕವೇ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು‌.

ರಿಂಗ್ ರಸ್ತೆಯ ಉತ್ತನಹಳ್ಳಿ ಮೈದಾನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದೆ‌. ಚಾಮುಂಡೇಶ್ವರಿ ಸನ್ನಿಧಿಯಲ್ಲಿಯೇ ಸಮಾರೋಪ ಆಯೋಜಿಸಲು ಮೂರು ತಿಂಗಳ ಹಿಂದೆಯೇ ನಿಶ್ಚಯಿಸಲಾಗಿತ್ತು. 100 ಎಕರೆ ವಿಸ್ತಾರದ ಮೈದಾನದಲ್ಲಿ 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ಸೇರಲಿದ್ದಾರೆ ಎಂದರು.

ಏಪ್ರಿಲ್ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ ಎಂದು ತಿಳಿಸಿದರು.

‘ಪಂಚರತ್ನ’ ಕಾರ್ಯಕ್ರಮಗಳು ಎಚ್.ಡಿ.ದೇವೇಗೌಡರ ಕನಸು‌. 6 ದಶಕದ ಸುದೀರ್ಘ ರಾಜಕಾರಣದಲ್ಲಿ ಅವರಿಗೆ ಅಧಿಕಾರ ಸಿಕ್ಕಿದ್ದು ಎರಡೂವರೆ ವರ್ಷಗಳು ಮಾತ್ರ. ಪಂಚರತ್ನ ಕಾರ್ಯಕ್ರಮಗಳ ಜಾರಿಗೆ  2.5 ಲಕ್ಷ ಕೋಟಿ ಸಂಗ್ರಹಿಸಲಾಗುವುದು. ಬಂಡವಾಳ ವೆಚ್ಚವಾಗಿ ಕಾರ್ಯಕ್ರಮಗಳಿಗೆ ಸದ್ವಿನಿಯೋಗ ಮಾಡಲಾಗುವುದು. ಅದರಿಂದ ನಾಡಿನ ಎಲ್ಲ ಸಮುದಾಯಗಳ ಅಭಿವೃದ್ಧಿ ಆಗಲಿದೆ. ಸುವರ್ಣ ರಾಮರಾಜ್ಯ ಸ್ಥಾಪನೆಯಾಗಲಿದೆ. ಅಮೃತ ಕಾಲಕ್ಕೆ 2047 ಆಗಬೇಕಿಲ್ಲ. ಐದು ವರ್ಷ ಸಾಕು ಎಂದು ತಿಳಿಸಿದರು.

ಕಾಂಗ್ರೆಸ್ ಜನರಿಗೆ ನೀಡುತ್ತಿರುವ ಗ್ಯಾರೆಂಟಿ ಕಾರ್ಡ್‌ಗಳು ನಕಲಿ. ಸುಳ್ಳಿನ ಭರವಸೆಯಾಗಿದ್ದು, ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಕೊಡುವುದು ಕಷ್ಟ. ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸಗಡ, ರಾಜಸ್ಥಾನದಲ್ಲಿ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತಲ್ಲವೇ? ಬಿಜೆಪಿಯ ಯೋಜನೆಗಳೂ ಕೂಡ ಜಾಹೀರಾತುಗಳಲ್ಲಿ ಕಾಣುತ್ತವೆ. ಅವು ಜನರಿಗೆ ತಲುಪಿವೆಯೇ ಎಂದು ಪ್ರಶ್ನಿಸಿದರು.

ದೇವೇಗೌಡ ರೋಡ್ ಶೋ: ಸಮಾರೋಪದ ದಿನದಂದೇ ಎಚ್.ಡಿ.ದೇವೇಗೌಡ ಅವರು ಮೈಸೂರಿನ ಶ್ರೀರಾಂಪುರದಿಂದ ಸಮಾವೇಶದ ಸ್ಥಳದವರೆಗೆ 3 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವ್, ಮುಖಂಡರಾದ ಕೆ.ವಿ.ಮಲ್ಲೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ನಗರ ಘಟಕದ ಅಧ್ಯಕ್ಷ ಚಲುವೇಗೌಡ, ಮುಖಂಡರಾದ ಪ್ರೇಮಾ ಶಂಕರೇಗೌಡ, ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಎಸ್ ಬಿಎಂ ಮಂಜು ಇದ್ದರು.

ಹಿಂದಿನ ಲೇಖನಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯ
ಮುಂದಿನ ಲೇಖನಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ತನ್ನದು ಹಿಂದೂ ಪರಿಶಿಷ್ಟ ಜಾತಿ ಎಂದಿದ್ದ ಶಾಸಕನ ಆಯ್ಕೆ ರದ್ದುಪಡಿಸಿದ ಕೇರಳ ಹೈಕೋರ್ಟ್