ಮನೆ ರಾಜ್ಯ ಭಾನುವಾರವೂ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಸಿ: ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಸೂಚನೆ

ಭಾನುವಾರವೂ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಸಿ: ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಸೂಚನೆ

0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕೆಂಬ ಉದ್ದೇಶದಿಂದ, ಭಾನುವಾರದಂತಹ ಸಾರ್ವಜನಿಕ ರಜಾ ದಿನಗಳಲ್ಲಿಯೂ ಸಮೀಕ್ಷೆ ಮುಂದುವರಿಯಲಿ ಎಂದು ಮುಖ್ಯ ಆಯುಕ್ತ ಡಾ. ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ದಕ್ಷಿಣ ಮತ್ತು ಬೊಮ್ಮನಹಳ್ಳಿ ವಲಯ ಕಚೇರಿಗಳಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಯಶಸ್ವಿಯಾಗಿ ನಡೆಯಬೇಕಾದರೆ ಪ್ರತಿಯೊಬ್ಬ ಅಧಿಕಾರಿಯ ಸಹಕಾರ ಅಗತ್ಯವಿದೆ ಎಂದು ಹೇಳಿದರು. ವಿಶೇಷವಾಗಿ ಪರಿಶಿಷ್ಟ ಜಾತಿ ಸಮುದಾಯಗಳು ಹೆಚ್ಚು ವಾಸವಿರುವ ಬೂತ್ ಮಟ್ಟದ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಮೀಕ್ಷೆಗೆ ಬೇಕಾದ ಜಾಗೃತಿ ಮೂಡಿಸಲು, ಪ್ರತಿ ಬೂತ್‌ನ ಗಣತಿದಾರರ ಹೆಸರು ಹಾಗೂ ಸಂಪರ್ಕ ವಿವರಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಮತ್ತು ಈ ಮಾಹಿತಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷಾ ಕಾರ್ಯ ಸುಗಮವಾಗಿ ನಡೆಯಲು, ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಾಯ ಪಡೆಯುವಂತೆ ನಿರ್ದೇಶನ ನೀಡಿದರು. ಸಮೀಕ್ಷೆಯ ಮಾಹಿತಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಮುಖಾಂತರ ನಿಖರವಾಗಿ ವಿತರಣೆಯಾಗುವ ಮೂಲಕ, ನಿವಾಸಿಗಳ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶ ಇದಾಗಿದೆ.

ಈ ಸಭೆಯಲ್ಲಿ ಬಿಬಿಎಂಪಿ ಸಮನ್ವಯ ಸಮಿತಿಯ ಕಾರ್ಯದರ್ಶಿ ಹಾಗೂ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ವಲಯ ಆಯುಕ್ತರು ರಮ್ಯಾ ಮತ್ತು ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತರು ಮಧು ಹಾಗೂ ಅಜಿತ್, ಸಹಾಯಕ ಕಂದಾಯ ಅಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.