ಬೆಂಗಳೂರು: ಬೆಂಗಳೂರಿನ ಐ.ಎಸ್.ಐ ಬೆನ್ಸನ್ ಟೌನ್ ಇಲ್ಲಿ ‘ಮಕ್ಕಳ ಹಕ್ಕುಗಳು, ಕಾನೂನು/ಕಾಯಿದೆಗಳು ಮತ್ತು ಮಕ್ಕಳ ರಕ್ಷಣಾ ವ್ಯವಸ್ಥೆ‘ ಕುರಿತು 3 ದಿನಗಳ ತರಬೇತಿದಾರರ ತರಬೇತಿಗೆ ನಿವೃತ್ತ ಐ.ಎ.ಎಸ್ ಅಧೀಕಾರಿಯಾದ ಶ್ರೀ.ಲೂಕೋಸ್ ವಲ್ಲತ್ತರೈ, ಸ್ವತಂತ್ರ ಸಲಹೆಗಾರರು ಬೆಂಗಳೂರು ಇವರು ಉಧ್ಘಾಟಿಸಿ ಚಾಲನೆ ನೀಡಿದರು. ಈ ತರಬೇತಿಯನ್ನು ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ (ಕ) – ಕರ್ನಾಟಕ, ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಬೆಂಗಳೂರು ಮತ್ತು ಪಡಿ ಸಂಸ್ಥೆ, ಮಂಗಳೂರು ಇವರು ಜಂಟಿಯಾಗಿ ಆಯೋಜಿಸಿರುತ್ತಾರೆ.
ಈ ಮೂರು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಯಲ್ಲಿ ಮುಖ್ಯವಾಗಿ ಮಕ್ಕಳ ಹಕ್ಕುಗಳು, ಮಕ್ಕಳಿಗೆ ಸಂಬಂಧಿಸಿದ ಕಾಯಿದೆ, ನೀತಿಗಳು, ರಕ್ಷಣಾ ವ್ಯವಸ್ಥೆ, ವಕಾಲತ್ತು, ಮಕ್ಕಳ ಕುರಿತಾಗಿ ಸಮೀಕ್ಷೆ, ಅಧ್ಯಯನ ಮತ್ತು ಅಂಕಿ-ಸಂಖ್ಯೆಗಳ ಸಂಗ್ರಹ ಮಾಡುವ ಮೂಲಕ ಮಕ್ಕಳ ಪರವಾಗಿ ನಿಖರವಾದ ದತ್ತಾಂಶಗಳ ಮೂಲಕ ಸರಕಾರದೊಂದಿಗೆ ವಕಾಲತ್ತು, ಮತ್ತು ಕಾನೂನು, ನೀತಿ-ನಿಯಮಗಳ ರಚನೆಯಲ್ಲಿ ಒತ್ತಡ ಮತ್ತು ಆಂದೋಲನಗಳ ಮೂಲಕ ಕರ್ನಾಟಕದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸದೃಢವಾದ ತಂಡವನ್ನು ಬಲಪಡಿಸಿ ಒಂದು ಸಂಪನ್ಮೂಲ ತಂಡವನ್ನು ರಚನೆ ಮಾಡುವ ಉದ್ಧೇಶದಿಂದ ಈ ಒಂದು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಮೂಲಕ ತರಬೇತಿ ಪಡೆದ ಮಕ್ಕಳ ಹಕ್ಕುಗಳ ಅಭಿವೃದ್ದಿ ಕಾರ್ಯಕರ್ತರು/ಯುವಜನರು ಮರಳಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಮಕ್ಕಳ ಕ್ಷೇತ್ರದಲ್ಲಿ ಅಥವಾ ಸಮುದಾಯ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಆಧಾರಿತವಾಗಿ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು ಮತ್ತು ಸಮಾನ ಮನಸ್ಕರನ್ನು ಗುರತಿಸಿ ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಗಾಗಿ ಕಾರ್ಯ ನಿರ್ವಹಿಸಲು ಒಂದು ಬಲಿಷ್ಟ ತಂಡವನ್ನು ರಚನೆ ಮಾಡುವುದರೊಂದಿಗೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಗಟ್ಟಿ ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸುವಂತೆ ಮಾಡುವುದರೊಂದಿಗೆ ಮಕ್ಕಳ ಹಕ್ಕುಗಳ ಸಂರಕ್ಷಣೆಯನ್ನು ಸುಸ್ಥಿರವಾಗಿ ತೆಗೆದುಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಕಾರ್ಯಗಾರವನ್ನು ಉಧ್ಘಾಟಿಸಿ ಮಾತನಾಡಿದ ನಿವೃತ್ತ ಐ.ಎ.ಎಸ್ ಅಧೀಕಾರಿಯಾದ ಲೂಕೋಸ್ ವಲ್ಲತ್ತರೈ ಇವರು ಸಮಾಜ ಅಭಿವೃದ್ಧಿ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಮಕ್ಕಳ ಹಕ್ಕುಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಇವತ್ತು ಸಮಾಜದಲ್ಲಿ ನಾನಾ ರಿತೀಯ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಇವತ್ತು ಜಾಗೃತರಾಗಬೇಕಾಗಿದೆ. ತಮ್ಮ ಕೆಲಸದಲ್ಲಿ ಭದ್ಧತೆ, ಪ್ರಾಮಾಣಿಕತೆ, ಕೆಲಸದಲ್ಲಿ ಆಸಕ್ತಿ, ವಿಶ್ಲೇಷಾತ್ಮಕ ಆಲೋಜನೆ, ಸೂಕ್ಷ್ಮ ಗೃಹಿಸುವ ಶಕ್ತಿ ಮತ್ತು ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕಾಗಿದೆ ಎಂದು ಹೇಳುತ್ತಾ ಸಾಮಾಜಿಕ ಕಾರ್ಯಕರ್ತರಾದ ನಾವು, ಸಮಾನ್ಯ ನಾಗಾರಿಕ, ಸರಕಾರ ಮತ್ತು ಸಂಘ-ಸಂಸ್ಥೆಗಳು ಜೋತೆಯಾಗಿ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ. ಇವತ್ತು ನಮ್ಮ ದೇಶದಲ್ಲಿ ಮಕ್ಕಳ ಹಕ್ಕುಗಳು ಮತ್ತು ಪರಿಸ್ಥಿತಿ ತುಂಬಾ ಸಂಕಷ್ಟ ಮತ್ತು ಅಪಯಕಾರಿ ಹಂತದಲ್ಲಿದೆ. ಇವತ್ತು ಮಕ್ಕಳ ಮೇಲೆ ನಾವು ಉಹಿಸದಷ್ಟು ನಾನಾ ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ, ಕಾನೂನು/ಕಾಯಿದೆಗಳು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ, ಇಲಾಖೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಆದುದರಿಂದ ಇವತ್ತು ಸಮುದಾಯ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮಗೆ ಇವತ್ತು ದೊಡ್ಡ ಸವಲಾಗಿದೆ. ಆದುದರಿಂದ ಇವತ್ತು ನಮಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶಗಳು ಇರುವುದರಿಂದ ನಾವು ಉತ್ಸಾಹ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದರ ಸದಸ್ಯ ವೆಂಕಟೇಶ್ ಎಮ್ ತರಬೇತಿದಾರರನ್ನು ಮಾತನಾಡುತ್ತಾ, ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ – ಕರ್ನಾಟಕ ಇದರ ಪ್ರಾರಂಭ, ಈ ಆಂದೋಲನದ ಮೂಲಕ ಮಾಡಿದ ಹೊರಾಟಗಳು, ಮಕ್ಕಳ ಹಕ್ಕುಗಳು ಬೆಳೆದು ಬಂದ ಹೊರಾಟದ ಹಾದಿ ಮತ್ತು ಮುಖ್ಯವಾಗಿ ಇವತ್ತು ನಮ್ಮ ದೇಶ, ರಾಜ್ಯದಲ್ಲಿ ಬಾಲಕಾರ್ಮಿಕ ಮಕ್ಕಳ ಸ್ಥಿತಿಗತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಬ್ರೂಣ ಹತ್ಯೆ ಹೀಗೆ ಹಲವಾರು ವಿಷಯಗಳ ಕುರಿತು ಮಾತನಾಡುತ್ತಾ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಸ್ಥಳೀಯ ಮಟ್ಟದಲ್ಲಿ ಇಲಾಖೆಗಳು ಮಕ್ಕಳ ಹಕ್ಕುಗಳ ವಿಷಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದಲ್ಲಿ ಅಥವಾ ದೂರುಗಳಿಗೆ ಸ್ಪಂದಿಸದೆ ಇದ್ದಲ್ಲಿ ನೇರವಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರನ್ನು ನೀಡಬಹುದು ಎಂದು ತಿಳಿಸಿದರು.
ಮೊದಲನೇ ದಿನದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಆರ್.ಟಿ ಕಾರ್ಯಕಾರಿ ನಿರ್ದೇಶಕರು ಡಾ. ವಾಸುದೇವ ಶರ್ಮಾ ಎನ್ ಎ ಮಾತನಾಡಿ, ಸಾಮಾಜಿಕ ಅಭಿವೃದ್ಧಿಯ ವಿವಿಧ ಆಯಾಮಗಳು, ಭಾರತ ಸಂವಿಧಾನದ ಆಶಯಗಳು, ಸುಸ್ಥಿರ ಅಭಿವೃದ್ಧಿಯ ಗುರಿಗಳು ಮತ್ತು ವಿಶ್ವ ಮಕ್ಕಳ ಹಕ್ಕುಗಳ ಒಡಂಬಡಿಕೆ, ಮಕ್ಕಳ ಹಕ್ಕುಗಳು ಕುರಿತು ತರಬೇತಿಯನ್ನು ನೀಡಿದರು.
ಇನ್ನೊರ್ವ ಮುಖ್ಯ ಸಂಪನ್ಮೂಲ ವ್ಯಕ್ತಿ ಶಿಕ್ಷಣ ಅಭಿವೃದ್ದಿ ತಜ್ಞರು ಡಾ. ನಿರಂಜನಾರಾದ್ಯ ವಿ ಪಿ ಮಾತನಾಡಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆ 2009, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕುರಿತು ತರಬೇತಿ ನೀಡಿದರು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಅಧ್ಯಕ್ಷ ಕೋಸಿ ಮಾಥ್ಯೂವ್ ಉಧ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಆರ್.ಎಲ್.ಹೆಚ್.ಪಿ ನಿರ್ದೇಶಕ ಸರಸ್ವತಿ ತರಬೇತಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಆರ್.ಎಲ್.ಹೆಚ್.ಪಿ. ಹಿರಿಯ ಯೋಜನಾ , ಸಂಯೋಜಕರು ಸಂಪತ್ ಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.
ಆರ್.ಎಲ್.ಹೆಚ್.ಪಿ ಯೋಜನಾ ಸಂಯೋಜಕರು ಶಶಿಕುಮಾರ ಎಸ್ ಧನ್ಯವಾದ ಸಲ್ಲಿಸಿದರು. ಮೊದಲನೇ ದಿನದ ತರಬೇತಿಯಲ್ಲಿ ಕರ್ನಾಟಕದ 31 ಜಿಲ್ಲೆಗಳಿಂದ 55ಕ್ಕೂ ಹೆಚ್ಚಿನ ಜನರು ತರಬೇತಿಯಲ್ಲಿ ಭಾಗವಹಿಸಿದ್ದರು.