ಮೈಸೂರು: ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ₹1.12 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹10.64 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ₹6.42 ಕೋಟಿ ಸಾಲವೂ ಇದೆ. ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರಗಳನ್ನು ಅವರು ಒದಗಿಸಿದ್ದಾರೆ.
ಪತ್ನಿ ಆರ್.ಭಾರತಿ, ಪುತ್ರ ನಿತಿನ್ ವೆಂಕಟೇಶ್ ಹಾಗೂ ಸೊಸೆ ಅರ್ಚನ ನಿತಿನ್ ಅವರ ಆಸ್ತಿ ಮಾಹಿತಿಯನ್ನೂ ನೀಡಿದ್ದಾರೆ. ಬಿಎಸ್ಸಿ ಪದವೀಧರರಾದ 74 ವರ್ಷದ ವೆಂಕಟೇಶ್ ಅವರು ವಾಟ್ಸ್ ಆ್ಯಪ್ ಬಳಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಖಾತೆಯನ್ನೂ ಹೊಂದಿಲ್ಲ. ಯಾವುದೇ ಅಪರಾಧ ಪ್ರಕರಣಗಳಿಲ್ಲ ಎಂದು ತಿಳಿಸಿದ್ದಾರೆ.
ವ್ಯವಸಾಯ ಹಾಗೂ ವಾಣಿಜ್ಯೋದ್ಯಮ ತಮ್ಮ ಆದಾಯದ ಮೂಲ ಎಂದು ತಿಳಿಸಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಪತ್ನಿ ಗೃಹಿಣಿ ಎಂದು ತಿಳಿಸಿದ್ದಾರೆ.
ತಮ್ಮ ಕೈಯಲ್ಲಿ ₹5.41 ಲಕ್ಷ, ಪತ್ನಿ ಬಳಿ ₹3.75 ಲಕ್ಷ, ನಿತಿನ್ ಬಳಿ ₹11.58 ಲಕ್ಷ, ಸೊಸೆ ಬಳಿ ₹1.23 ಲಕ್ಷ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ₹ 87 ಲಕ್ಷ, ವಿಜಯ ಬ್ಯಾಂಕ್ ನಲ್ಲಿ ₹50 ಸಾವಿರದ ಷೇರುಗಳಿವೆ ಎಂದು ಮಾಹಿತಿ ನೀಡಿದ್ದಾರೆ.
₹12 ಲಕ್ಷ ಮೌಲ್ಯದ ಟೊಯೊಟಾ ಇನ್ನೋವಾ ಕಾರು, ಕ್ರಮವಾಗಿ ₹9 ಲಕ್ಷ ಮೌಲ್ಯದ ಟ್ರಾಕ್ಟರ್ ಮತ್ತು ಟ್ರೇಲರ್ ಹಾಗೂ ₹ 8.25 ಲಕ್ಷ ಮೌಲ್ಯದ ಮಿನಿ ಟ್ರಾಕ್ಟರ್ ಮಾಲೀಕ ಅವರು. ಪತ್ನಿ ಹೆಸರಿನಲ್ಲಿ ₹4 ಲಕ್ಷ ಮೌಲ್ಯದ ಹೋಂಡ ಅಮೇಜ್ ಕಾರಿದೆ. ಮಗನ ಹೆಸರಿನಲ್ಲಿ ₹6 ಲಕ್ಷ ಮೌಲ್ಯದ ಎಕ್ಸ್ ಯುವಿ–300, ₹10 ಲಕ್ಷ ಮೌಲ್ಯದ ಮಹೀಂದ್ರ ತಾರ್ ಕಾರ್ ಇದೆ.
ವೆಂಕಟೇಶ್ ಅವರು ₹7.50 ಲಕ್ಷ ಬೆಲೆ ಬಾಳುವ 150 ಗ್ರಾಂ. ಚಿನ್ನಾಭರಣ ಇಟ್ಟಿದ್ದಾರೆ. ಪತ್ನಿ ಬಳಿ ₹24 ಲಕ್ಷ ಮೌಲ್ಯದ 400 ಗ್ರಾಂ. ಚಿನ್ನಾಭರಣಗಳಿವೆ. ಮಗನ ಬಳಿ 150 ಗ್ರಾಂ. ಹಾಗೂ ಸೊಸೆಯ ಬಳಿ 250 ಗ್ರಾಂ. ಚಿನ್ನಾಭರಣ ಇವೆ ಎಂದು ತಿಳಿಸಿದ್ದಾರೆ.