ನವದೆಹಲಿ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರದ್ದತಿಯ ವಿರುದ್ಧ ದೇಶಾದ್ಯಂತ ಅಭಿಯಾನ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಜನವರಿ 5 ರಿಂದ ಎಲ್ಲ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೂಚನೆ ನೀಡಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿ ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ನರೇಗಾ ಕೇವಲ ಒಂದು ಯೋಜನೆಯಲ್ಲ, ಬದಲಾಗಿ ಸಾಂವಿಧಾನಿಕವಾಗಿ ಖಾತರಿಪಡಿಸಿದ ಕೆಲಸ ಮಾಡುವ ಹಕ್ಕಾಗಿದೆ. ಅದನ್ನು ದುರ್ಬಲಗೊಳಿಸುವುದು ಅಥವಾ ತೆಗೆದುಹಾಕುವುದು ಬಡವರು ಮತ್ತು ಕಾರ್ಮಿಕರ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನರೇಗಾ ಕಾಯ್ದೆಯನ್ನ ರಕ್ಷಣೆ ಮಾಡಬೇಕು ಈ ಹಿನ್ನಲೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕು. ಅದಕ್ಕಾಗಿ ಪಕ್ಷವು ಈ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಬೇಕಿದೆ ಕಾಂಗ್ರೆಸ್ ಈ ವಿಷಯದ ಬಗ್ಗೆ ಮೌನವಾಗಿರುವುದಿಲ್ಲ ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆಯನ್ನು ಮುಂದುವರಿಸುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳಿಗೆ ಸಭೆಯಲ್ಲಿ ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ. ಇದೇ ಸಭೆಯಲ್ಲಿ ಮುಂಬರುವ ಐದು ರಾಜ್ಯಗಳ ಚುನಾವಣೆ, ವೋಟ್ ಚೋರಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಸಭೆಯಲ್ಲಿ ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.














