ಪಾಟ್ನಾ : ಸರ್ದಾರ್ ವಲ್ಲಭಭಾಯಿ ಪಟೇಲ್‌ರಂತಹ ಮಹಾನ್ ವ್ಯಕ್ತಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ ಪಕ್ಷ 41 ವರ್ಷ ವಿಳಂಬ ಮಾಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಅಮಿತ್ ಶಾ ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಲಕ್ಷದ್ವೀಪದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸರ್ದಾರ್ ಪಟೇಲ್ ಕಾರಣರಾಗಿದ್ದರು. ಆದರೆ ದುರದೃಷ್ಟವಶಾತ್, ಅಂತಹ ಮಹಾನ್ ವ್ಯಕ್ತಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ 41 ವರ್ಷ ಕಾಲ ವಿಳಂಬ ಮಾಡಿತ್ತು ಎಂದು ದೂರಿದ್ದಾರೆ.
ಪಟೇಲ್ ಅವರ ಮರಣದ ನಂತರ ಕಾಂಗ್ರೆಸ್ಸಿನವರು ಅವರ ಸಮಾಧಿಯಾಗಲಿ, ಸ್ಮಾರಕವಾಗಲಿ ಯಾವುದನ್ನೂ ನಿರ್ಮಿಸಿರಲಿಲ್ಲ. ನರೇಂದ್ರ ಮೋದಿ, ಗುಜರಾತ್ ಸಿಎಂ ಆದಾಗ, ಅವರ ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದು ಈಗ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ ಎಂದಿದ್ದಾರೆ.














