ಮನೆ ರಾಜ್ಯ ಬೆಂಗಳೂರಿನಲ್ಲಿ ಜನರ ಬಳಿ ಹೋಗಿ ಮತ ಯಾಚಿಸುವ ಧೈರ್ಯ ಕಾಂಗ್ರೆಸ್‌ಗಿಲ್ಲ, ಜನರು ಕಾಂಗ್ರೆಸ್‌ಗೆ ಬಾಯ್‌ ಬಾಯ್‌...

ಬೆಂಗಳೂರಿನಲ್ಲಿ ಜನರ ಬಳಿ ಹೋಗಿ ಮತ ಯಾಚಿಸುವ ಧೈರ್ಯ ಕಾಂಗ್ರೆಸ್‌ಗಿಲ್ಲ, ಜನರು ಕಾಂಗ್ರೆಸ್‌ಗೆ ಬಾಯ್‌ ಬಾಯ್‌ ಮಾಡಲಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

0

ಬೆಂಗಳೂರು: ಬೆಂಗಳೂರಿನಲ್ಲಿ ಜನರ ಬಳಿ ಹೋಗಿ ಮತ ಯಾಚಿಸುವ ಧೈರ್ಯ ಬಿಜೆಪಿಗಿದೆ. ಆದರೆ ಕಾಂಗ್ರೆಸ್‌ಗೆ ಅಂತಹ ಧೈರ್ಯವಿಲ್ಲ. ಅಲ್ಲದೆ ಜನರು ಕಾಂಗ್ರೆಸ್‌ಗೆ ಬಾಯ್‌ ಬಾಯ್‌ ಹೇಳಲು ತೀರ್ಮಾನಿಸಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

Join Our Whatsapp Group

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಆರ್‌.ಅಶೋಕ ಅವರು ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರಿನಲ್ಲಿ ಜನರ ಬಳಿ ಹೋಗಿ ಮತ ಯಾಚಿಸುವ ಧೈರ್ಯ ಬಿಜೆಪಿಗಿದೆ. ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮೆಟ್ರೊ ಯೋಜನೆಯನ್ನು ಅಟಲ್‌ ಬಿಹಾರಿ ವಾಜಪೇಯಿ ನೀಡಿದರು. ಹಾಗೆಯೇ ವಿಮಾನ ನಿಲ್ದಾಣವನ್ನೂ ನೀಡಿದ್ದಾರೆ. ಉಪನಗರ ರೈಲು ಯೋಜನೆ, ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ಬಿಜೆಪಿ ನೀಡಿದೆ. ಈ ಎಲ್ಲ ಕಾರಣಗಳಿಂದಾಗಿ ಜನರ ಬಳಿ ಹೋಗಿ ಮತ ಯಾಚಿಸುವ ಹಕ್ಕು ಬಿಜೆಪಿಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಕಳೆದ ಹತ್ತು ತಿಂಗಳಲ್ಲಿ ಬ್ರ್ಯಾಂಡ್‌ ಬೆಂಗಳೂರು ಎಂದು ಹಾರ್ಮ್‌ ಬೆಂಗಳೂರನ್ನು ಸೃಷ್ಟಿಸಿದೆ. ಈಗ ಬಾಯ್‌ ಬಾಯ್‌ ಬೆಂಗಳೂರು ಮಾಡಿದ್ದು, ಕುಡಿಯುವ ನೀರಿಲ್ಲದೆ ಜನರು ನಗರವನ್ನು ಬಿಟ್ಟು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇರಳ ಸರ್ಕಾರದಿಂದ ಐಟಿ ಕಂಪನಿಗಳ ಮುಖ್ಯಸ್ಥರಿಗೆ ಪತ್ರ ಬಂದಿದೆ. ಬೆಂಗಳೂರಲ್ಲಿ ಮುಖ ತೊಳೆಯಲು ಕೂಡ ನೀರಲ್ಲದಿರುವುದರಿಂದ ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅನೇಕ ಕಂಪನಿಗಳು ನಗರವನ್ನು ಬಿಟ್ಟು ಹೋಗುತ್ತಿವೆ. ಕಾಂಗ್ರೆಸ್‌ನ ದುರಾಡಳಿತ, ದುರ್ವರ್ತನೆಯನ್ನು ನೋಡಿ ಜನರು ಕಾಂಗ್ರೆಸ್‌ಗೆ ಬಾಯ್‌ ಬಾಯ್‌ ಹೇಳಲಿದ್ದಾರೆ ಎಂದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಬಲವಂತವಾಗಿ ಅಭ್ಯರ್ಥಿಯನ್ನು ಎಳೆದು ತಂದು ನಿಲ್ಲಿಸಿದೆ. ಇದು ಅವರ ಚುನಾವಣಾ ಗಂಭೀರತೆಯನ್ನು ತೋರಿಸುತ್ತದೆ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಪರವಾಗಿ ಚುನಾವಣೆ ಪ್ರಚಾರ ನಡೆಸುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಶಾಸಕರು ಹಾಗೂ ಸಂಸದರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ತಲುಪಿಸಲಾಗುವುದು. ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಐದನೇ ಸ್ಥಾನಕ್ಕೆ ತಂದಿದ್ದು ಮುಂದೆ ಮೂರನೇ ಸ್ಥಾನಕ್ಕೆ ತರುವ ಗುರಿ ಇದೆ. ಭ್ರಷ್ಟಾಚಾರ ಮಾಡಿ ಹಣ ಲೂಟಿ ಹೊಡೆದವರಿಂದ ಹಣ ಪಡೆದು ಅದನ್ನು ಬಡವರಿಗೆ ಕೊಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜನರು ಬಿಜೆಪಿಗೆ ಕಳೆದ ಬಾರಿ 3.30 ಲಕ್ಷ ಲೀಡ್‌ ಕೊಟ್ಟಿದ್ದಾರೆ. ಈ ಬಾರಿ ಇನ್ನೂ ಒಂದು ಲಕ್ಷ ಹೆಚ್ಚು ಲೀಡ್‌ ನೀಡುವಂತೆ ಕಾರ್ಯನಿರ್ವಹಿಸಲಾಗುವುದು ಎಂದರು.