ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಹೆಚ್‌ಡಿಕೆ ಆಯ್ಕೆ: ಬಿಜೆಪಿ ಅಧಿಕೃತ ಘೋಷಣೆ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಕೆರಳಿಸಿದ್ದ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುಮಾರಣ್ಣ’ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸುವ ಮಹಾಚುನಾವಣೆಯಾಗಿದೆ.ಅದರಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸುರಭಿ ಹೋಟೆಲ್ ಸಭಾಂಗಣದಲ್ಲಿ ನೆಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 9 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ.ಈಗ ರಾಜ್ಯದಲ್ಲಿ ಭೀಕರ ಬರಗಾಲ ಇದೆ. 800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಜನ-ಜಾನುವಾರುಗಳು ಕುಡಿಯುವ ನೀರು, ಮೇವಿಲ್ಲದೆ ಪರಿತಪಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಷ್ಟದಲ್ಲಿರುವ ಜನರ ಬಗ್ಗೆ ಕನಿಕರ ಇಲ್ಲ.ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿಯಾಗಿಲ್ಲ,ಬದಲಿಗೆ ಒಂದು ಸಮಾಜದ ಮುಖ್ಯಮಂತ್ರಿ
ಯಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನಿಂದ ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಯಾಗುತ್ತಿದೆ. ಬಿಜೆಪಿ-ಜೆಡಿಎಸ್ ಒಂದಾಗುತ್ತಿದ್ದಂತೆ ಕಾಂಗ್ರೆಸ್‌ನವರಿಗೆ ನಿದ್ರೆ ಬರುತ್ತಿಲ್ಲ. ನಮ್ಮ ಮೈತ್ರಿಯಿಂದ ಕಾಂಗ್ರೆಸ್ ಕಾರ್ಯಕರ್ತರು ತತ್ತರಿಸಿ ಹೋಗಿದ್ದಾರೆ. ಭಯದಿಂದ ಮಂತ್ರಿ ಮಂಡಲದ ಸದಸ್ಯರು ಚುನಾವಣೆ ಅಭ್ಯರ್ಥಿ ಆಗಲಿಲ್ಲ. ಜನರಿಂದ ಜನರಿಗಾಗಿ ಇರುವ ಕುಮಾರಸ್ವಾಮಿ ಮಂಡ್ಯದಿಂದ ಸಂಸದರಾಗಬೇಕು. 28 ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ.
28ಕ್ಕೆ 28 ಗೆಲ್ಲುವುದೇ ನಮ್ಮ ಗುರಿ. ಎಚ್‌ಡಿಕೆ,ದೇವೇಗೌಡರು, ಬಿ.ಎಸ್.ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ನಾವೇ ನಾಯಕರು,ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಬೇಕು. ಚುನಾವಣೆ ಮುಗಿಯುವವರೆಗೂ ಜವಾಬ್ದಾರಿಯಿಂದ ನುಣುಚಿ
ಕೊಳ್ಳಬಾರದು.ಕುಮಾರಸ್ವಾಮಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಬೇಕು.ಮಂಡ್ಯದಿಂದಲೇ ಮೊದಲ ಫಲಿತಾಂಶ ಬರಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.