ಮನೆ ರಾಜ್ಯ ಹಾಲಿನ ಪ್ರೋತಾಹಧನ ನೀಡದ ಕಾಂಗ್ರೆಸ್‌ ಸರ್ಕಾರ, ಖಜಾನೆ ಖಾಲಿಗೆ ಇದೇ ಸಾಕ್ಷಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಹಾಲಿನ ಪ್ರೋತಾಹಧನ ನೀಡದ ಕಾಂಗ್ರೆಸ್‌ ಸರ್ಕಾರ, ಖಜಾನೆ ಖಾಲಿಗೆ ಇದೇ ಸಾಕ್ಷಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

0

ಬೆಂಗಳೂರು: ಕಳೆದ ಎಂಟು ತಿಂಗಳಿಂದ ರೈತರಿಗೆ ಸರ್ಕಾರ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಎಂಟು ತಿಂಗಳಿಂದ ಹಾಲಿನ 5 ರೂ. ಪ್ರೋತ್ಸಾಹಧನ ನೀಡಿಲ್ಲ. ಸುಮಾರು 700 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಜನರಿಗೆ ತೆರಿಗೆ ಹಾಕಿ ಅವರಿಂದ ವಸೂಲಿ ಮಾಡಿ ನಂತರ ಮಹಿಳೆಯರಿಗೆ ಹಣ ನೀಡುತ್ತೇವೆ ಎಂದು ನಾಟಕವಾಡಿದ್ದಾರೆ. ಉಚಿತ ಕೊಡುವ ಬದಲು ವಿದ್ಯಾರ್ಥಿಗಳಿಗೆ ಉಚಿತ ಪಾಸ್‌, ಶಾಲೆ, ಆಸ್ಪತ್ರೆ ನಿರ್ಮಾಣ ಮೊದಲಾದ ಯೋಜನೆಗಳನ್ನು ನೀಡಬೇಕಿತ್ತು. ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಡ ಎಂದರು.

ಖಜಾನೆ ಖಾಲಿ ಮಾಡಿಕೊಂಡ ಬಳಿಕ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಕಳೆದ 50 ವರ್ಷದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎಂದು ತಿಳಿಸಲು ಸವಾಲು ಹಾಕುತ್ತೇನೆ. ಕಾಂಗ್ರೆಸ್‌ನ ಯೋಗ್ಯತೆಗೆ ಕರ್ನಾಟಕಕ್ಕೆ ಒಂದು ಕೋಟಿ ರೂ. ಕೂಡ ಬರ ಪರಿಹಾರ ನೀಡಿಲ್ಲ ಎಂದು ದೂರಿದರು.

ರಾಹುಲ್‌ ಗಾಂಧಿ ಎಲ್ಲೇ ಹೋದರೂ ಪಂಗನಾಮ ಸಿಗುತ್ತಿದೆ. ಅವರ ನಾಯಕತ್ವದ ಮೇಲೆ ವಿಶ್ವಾಸ ಇಲ್ಲವೆಂದೇ ಸಿಎಂ ಸಿದ್ದರಾಮಯ್ಯ ಕೇವಲ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಹಿಂದಿನ ಯುಪಿಎ ಸರ್ಕಾರ ಏನು ಮಾಡಿದೆ ಎಂದು ಜಾಹೀರಾತು ನೀಡಬೇಕಿತ್ತು. ಇದೇ ಕಾಂಗ್ರೆಸ್‌ ದೇಶಕ್ಕೆ ಚೊಂಬು ನೀಡಿತ್ತು. ನಂತರ ಬಂದ ಪ್ರಧಾನಿ ನರೇಂದ್ರ ಮೋದಿ ಶೌಚಾಲಯಗಳನ್ನು ಕಟ್ಟಿಸಿ ಚೊಂಬು ಬಳಸದಂತೆ ಮಾಡಿದರು ಎಂದರು.

ಎಚ್‌ಎಎಲ್‌ ಮುಚ್ಚುತ್ತಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಅದೇ ಎಚ್‌ಎಎಲ್‌ ಈಗ 84 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಇಂದು ಎಲ್ಲ ಸಾರ್ವಜನಿಕ ಉದ್ದಿಮೆಗಳು ಲಾಭ ಮಾಡುತ್ತಿವೆ. 2022 ರ ವೇಳೆಗೆ 6 ಕೋಟಿ ಹೊಸ ಎಂಎಸ್‌ಎಂಇ ಉದ್ಯಮಗಳು ಸೃಷ್ಟಿಯಾಗಿವೆ. ರೋಜ್‌ಗಾರ್‌ ಯೋಜನೆಯಡಿ 7.5 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ ಎಂದು ಹೇಳಲಿ ಎಂದು ಸವಾಲೆಸೆದರು.

ಡಾ.ಬಿ.ಆರ್‌.ಅಂಬೇಡ್ಕರ್‌ ರಚಿತ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲು ಇಲ್ಲ. ಕಾಂಗ್ರೆಸ್‌ಗೆ ಮೊದಲೇ ಅಂಬೇಡ್ಕರ್‌ ಬಗ್ಗೆ ಗೌರವವಿಲ್ಲ. ಆದ್ದರಿಂದ ಸಂವಿಧಾನವನ್ನೇ ತಿರುಚಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದ್ದಾರೆ. ಪಿತೃಗಳಿಗೆ ತಿಥಿಯಲ್ಲಿ ವಡೆ ಇಡುತ್ತಾರೆ. ಅಂತಹ ಹೆಸರಿನ ಸ್ಯಾಮ್‌ ಪಿತ್ರೋಡಾ ಅವರು, ಜನರ ಪಿತ್ರಾರ್ಜಿತ ಆಸ್ತಿಗಳಿಗೆ ತರ್ಪಣ ಬಿಡಲು ಸಲಹೆ ನೀಡಿದ್ದಾರೆ. ಈ ಹೇಳಿಕೆಯನ್ನು ಕಾಂಗ್ರೆಸ್‌ ನಮ್ಮದಲ್ಲ ಎಂದಿದೆ, ಆದರೆ ಹೇಳಿಕೆ ಬದಲಿಸಲು ಕಾಂಗ್ರೆಸ್‌ ಹಿರಿಯರೇ ಸೂಚನೆ ನೀಡಿದ್ದಾರೆ ಎಂದರು.

ಪ್ರಜ್ವಲ್‌ ರೇವಣ್ಣ ನಿಮ್ಮ ಎಂಪಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲ. ಭಯೋತ್ಪಾದನಾ ಚಟುವಟಿಕೆಗೆ ಅವರು ಹೇಳಿದ ಮಾತೆಲ್ಲ ಸುಳ್ಳಾಯಿತು. ಅವರು ಗೃಹಸಚಿವ ಅಮಿತ್‌ ಶಾ ಬಗ್ಗೆ ಹೇಳಿದ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. 28 ಸ್ಥಾನದಲ್ಲಿ ಕೆಲವು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟಿದ್ದು, ಅಲ್ಲಿ ಯಾರು ಸ್ಪರ್ಧಿಸಬೇಕೆಂದು ಜೆಡಿಎಸ್‌ ತೀರ್ಮಾನಿಸುತ್ತದೆ. ಪ್ರಜ್ವಲ್‌ ರೇವಣ್ಣ ನಮ್ಮ ಸಂಸದರಲ್ಲ. ಇವರೇ ಜೋಡೆತ್ತು ಎಂದು ಅವರ ಜೊತೆಗೆ ಇದ್ದು ಮೊದಲಿಗೆ ಗೆಲ್ಲಿಸಿದ್ದರು. ಇದಕ್ಕೆ ಕಾಂಗ್ರೆಸ್ಸೇ ಉತ್ತರ ನೀಡಬೇಕು. ಪ್ರಜ್ವಲ್‌ ವಿದೇಶಕ್ಕೆ ಹೋಗುವಾಗ ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದರು? ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು? ಕಾಂಗ್ರೆಸ್‌ ಸರ್ಕಾರ ಗುಪ್ತಚರ ದಳ ವಿಫಲವಾಗಿದೆ ಎಂದು ಒಪ್ಪಿಕೊಳ್ಳಲಿ ಎಂದರು.

ಈ ದೇಶದ ಕಾನೂನಿಗೆ, ಸಂವಿಧಾನಕ್ಕೆ ಬಿಜೆಪಿ ಗೌರವ ನೀಡುತ್ತದೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗೆ ಪಕ್ಷ ಬೆಂಬಲ ನೀಡುವುದಿಲ್ಲ. ಬಿಜೆಪಿಯಿಂದ ಕಠಿಣ ಕ್ರಮ ವಹಿಸಲಾಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟು ಇಳಿದು ಬಿಜೆಪಿಗೆ ಅಧಿಕಾರ ನೀಡಿದರೆ 24 ಗಂಟೆಯಲ್ಲಿ ಪ್ರಜ್ವಲ್‌ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಥವಾ ಪೊಲೀಸ್‌ ಇಲಾಖೆಯ ಮೇಲೆ ಹಿಡಿತ ಇಲ್ಲ ಎಂದು ಕಾಂಗ್ರೆಸ್‌ ಸರ್ಕಾರ ಒಪ್ಪಿಕೊಳ್ಳಲಿ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಏಕೆ ಪ್ರಶ್ನೆ ಮಾಡಬೇಕು, ರಾಜ್ಯದ ಕಾನೂನು ಪಾಲನೆ ಕೇಂದ್ರ ಸರ್ಕಾರ ಮಾಡಬೇಕೆ ಎಂದು ಪ್ರಶ್ನಿಸಿದರು.

ಟಾಸ್ಕ್‌ ಫೋರ್ಸ್‌ ರಚಿಸಿ

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೂಡಲೇ ಟಾಸ್ಕ್‌ ಫೋರ್ಸ್‌ ರಚಿಸಿ ಪ್ರತಿ ತಾಲೂಕಿಗೆ 5 ಕೋಟಿ ರೂ. ಮೀಸಲಿಡಬೇಕು ಎಂದು ಆರ್‌.ಅಶೋಕ ಆಗ್ರಹಿಸಿದರು.