ಬೆಂಗಳೂರು: ಗುರುವಾರದಾಂದು ನಡೆದ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಸರ್ಕಾರವು ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ತೀರ್ಮಾನಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ.
ಭಾರತವು ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿ ಹಿಂದೂಗಳೊಡನೆ ಅನ್ಯ ಧರ್ಮಿಯರೂ ಸಹ ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕನಾಟಕದಲ್ಲಿ ಸಹ ಹಿಂದೂಗಳೊಡನೆ ಅನ್ಯ ಧರ್ಮೀಯರೂ ಸಹ ತಮ್ಮ ಧರ್ಮ-ಮತ ಆಚರಣೆ ಮಾಡಲು ಅವಕಾಶವಿದೆ. ಇದನ್ನು ನಾವು ಒಪ್ಪುತ್ತೇವೆ ಮತ್ತು ಪ್ರಶ್ನಿಸುವುದಿಲ್ಲ. ಆದರೆ ಹಿಂದೂಗಳಿಗೆ ಆಸೆ ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರುಳು ಮಾಡಿ ಮತಾಂತರಿಸುವುದನ್ನು ನಾವು ಖಂಡಿಸುತ್ತೇವೆ. ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಕನಾಟಕವು ಭಾರತದ್ದೇ ಒಂದು ಭಾಗವಾಗಿದೆ. ಇಲ್ಲಿನ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಅನ್ಯ ಧರ್ಮೀಯರಲ್ಲದೆ ಅತಿ ಸಂಖ್ಯೆಯಲ್ಲಿ ಹಿಂದೂಗಳೂ ಸಹ ಮತ ಹಾಕಿದ್ದು, ಅವರ ಮತದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದಲ್ಲ. ಇದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಕರ್ನಾಟಕದ ಹಿಂದೂಗಳು ಇದನ್ನು ಖಂಡಿಸುವುದರೊಂದಿಗೆ ಮಂತ್ರಿಮಂಡಲವು ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತದೆ.
ಈ ಹಿಂದಿನ ಸರ್ಕಾರವು ಶಾಲಾ ಪಠ್ಯದಲ್ಲಿ ರಾಷ್ಟ್ರ ಪುರುಷರ ಪರಿಚಯವನ್ನು ಸೇರಿಸಿದ್ದನ್ನು ಅಲ್ಪಸಂಖ್ಯಾತರನ್ನು ತುಷ್ಟಿಕರಿಸುವ ಸಲುವಾಗಿ ಸಾವರ್ಕರ್ ರವರಂತಹ ಅಪ್ರತಿಮ ದೇಶಭಕ್ತರ ಪರಿಚಯದ ಪಾಠಗಳನ್ನು ತೆಗೆಯಲು ನಿರ್ಧರಿಸುವುದನ್ನು ಸಹ ನಾವು ಖಂಡಿಸುತ್ತೇವೆ. ಈ ರೀತಿ ಸಮಾಜದಲ್ಲಿ ಶಾಂತಿಯನ್ನು ಕದಡುವ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಉತ್ತಮ ಆಡಳಿತ ನೀಡಲೆಂದು ಸರ್ಕಾರವನ್ನು ಪರಿಷತ್ ನ ಕಾರ್ಯಾಧ್ಯಕ್ಷರಾದ ಡಾ.ಎಂ.ಬಿ ಪುರಾಣಿಕ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.