ಬೆಂಗಳೂರು(Bengaluru): ರೌಡಿಗಳಿಗೆ ಬೆಳೆಯಲು ಅವಕಾಶ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ರೌಡಿಗಳನ್ನು ತಯಾರಿ ಮಾಡುವ ಕಾರ್ಖಾನೆಯಾಗಿದೆ. ಅವರಿಗೆ ಬಿಜೆಪಿ ಕುರಿತಾಗಿ ಮಾತನಾಡುವ ನೈತಿಕತೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಗಾರ್ಡನ್ ನಾಗಾ ಎಂಬ ರೌಡಿ ಸಚಿವ ಸೋಮಣ್ಣ ಮನೆಗೆ ಭೇಟಿ ವಿಚಾರವಾಗಿ ಮಾತನಾಡಿ, ರಾಜಕೀಯದಲ್ಲಿ ಸೋಮಣ್ಣ ಅವರಿಗೆ ಸಾಕಷ್ಟು ಅನುಭವ ಇದೆ. ಅವರ ರಾಜಕೀಯ ಜೀವನದಲ್ಲಿ ರೌಡಿ ಸಹವಾಸ ಮಾಡಿಲ್ಲ. ಅವರು ರೌಡಿಗಳ ಸಹಕಾರದಿಂದ ಚುನಾವಣೆ ಗೆದ್ದಿರುವ ಇತಿಹಾಸವೂ ಇಲ್ಲ ಎಂದು ಸಮರ್ಥಿಸಿಕೊಂಡರು.
ಸೋಮಣ್ಣ ಅವರು ಬಸವ ತತ್ವ ನಂಬಿದವರು. ಅವರ ಮೇಲೆ ಈ ಆಪಾದನೆ ಸರಿಯಲ್ಲ. ಯಾರಾದರೂ ಬಂದಿರಬಹುದು, ಆದರೆ ಅದನ್ನು ದೊಡ್ಡ ವಿಚಾರ ಮಾಡುವುದು ಸರಿಯಲ್ಲ. ರಾಜಕಾರಣಿಗಳು ಇಂತಹಾ ವ್ಯಕ್ತಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದರು.
ಕಾಂಗ್ರೆಸ್ ದೇಶದಲ್ಲಿ 50 ವರ್ಷ ಆಡಳಿತ ಮಾಡಿದೆ. ಬೇಕಾದಷ್ಟು ರೌಡಿಗಳ ಬೆಂಬಲದಿಂದ ಅಧಿಕಾರ ನಡೆಸಿದ್ದಾರೆ. ಹಿಂದೆ ಡಾನ್’ಗಳ ರಾಜ್ಯ ಇತ್ತು. ಇವಾಗ ಅವರೆಲ್ಲಾ ಮೂಲೆ ಸೇರಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಗೆ ಗೂಂಡಾಗಿರಿ, ಸಂಸ್ಕೃತಿ ಹಾಗೂ ಹಿನ್ನೆಲೆ ಇದೆ. ಬಿಜೆಪಿ ಗೂಂಡಾಗಿರಿಯ ರಾಜಕಾರಣವನ್ನು ಪ್ರೋತ್ಸಾಹ ಮಾಡುವುದಿಲ್ಲ. ಈ ಬಗ್ಗೆ ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. ಕೆಸರಿನ ಶಾಲು ಹಾಕಿದ ತಕ್ಷಣ ಕೇಸರಿ ಆಗಲ್ಲ. ಕೇಸರಿ ಜೊತೆಗೆ ಹಸಿರು ಇದ್ದರೆ ಮಾತ್ರ ಬಿಜೆಪಿ ಆಗುತ್ತದೆ. ಜೊತೆಗೆ ಪಕ್ಷದ ಚಿಹ್ನೆ ಬೇಕು. ಸ್ವಾಮೀಜಿಗಳು ಕೇಸರಿ ಶಾಲು ಹಾಕುತ್ತಾರೆ. ಮುಸ್ಲಿಮರೂ ಹಾಕುತ್ತಾರೆ. ಕೇಸರಿ ಹಾಕಿದ ತಕ್ಷಣವೇ ಅವರು ಬಿಜೆಪಿ ಎಂಬ ಭಾವನೆ ಒಳ್ಳೆಯದಲ್ಲ ಎಂದರು.
ಕಾಂಗ್ರೆಸ್ ನವರು ಬೇಕಾದಷ್ಟು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಬೇಕಾದಷ್ಟು ಜನ ರೌಡಿಗಳು ಇರುವ ಫೋಟೋ ಇವೆ ಎಂದು ಅವರು, ಫೈಟರ್ ರವಿ ಪಕ್ಷ ಸೇರ್ಪಡೆ ಮಾಡಿದ್ದು ಗಮನಕ್ಕೆ ಬಂದಿಲ್ಲ .ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡುತ್ತೇನೆ. ಆದರೆ ಕಾಂಗ್ರೆಸ್ ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಯಾವುದೇ ರೌಡಿ ಹಿನ್ನೆಲೆಯ ಸಮಾಜಘಾತುಕರಿಗೆ ಬಿಜೆಪಿಯಲ್ಲಿ ಅವಕಾಶ ಇಲ್ಲ ಎಂದರು.