ಮನೆ ರಾಜ್ಯ ಮತ ಬ್ಯಾಂಕ್​ ಗಾಗಿ ಕಾಂಗ್ರೆಸ್​ ಹೀನ ರಾಜಕಾರಣಕ್ಕಿಳಿದಿದೆ: ಸಂಸದ ನಳಿನ್ ಕುಮಾರ್ ಕಟೀಲು ವಾಗ್ದಾಳಿ

ಮತ ಬ್ಯಾಂಕ್​ ಗಾಗಿ ಕಾಂಗ್ರೆಸ್​ ಹೀನ ರಾಜಕಾರಣಕ್ಕಿಳಿದಿದೆ: ಸಂಸದ ನಳಿನ್ ಕುಮಾರ್ ಕಟೀಲು ವಾಗ್ದಾಳಿ

0

ಮಂಗಳೂರು: ಕಾಂಗ್ರೆಸ್ ದ್ವಿಮುಖ ನೀತಿ, ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಕೋಮು ಭಾವನೆ ಕೆರಳಿಸಿದ ಶಿಕ್ಷಕಿ ಸಸ್ಪೆಂಡ್​ ಮಾಡಬೇಕಿತ್ತು. ಅದು ಬಿಟ್ಟು ಶಾಸಕರ ಮೇಲೆ ಕೇಸ್​ಗಳನ್ನ ದಾಖಲಿಸಲಾಗಿದೆ. ಮತ ಬ್ಯಾಂಕ್​ಗಾಗಿ ಕಾಂಗ್ರೆಸ್​ ಹೀನ ರಾಜಕಾರಣಕ್ಕಿಳಿದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.

ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನದ ಆರೋಪ ಕೇಸ್​ ಸಂಬಂಧ ಪ್ರತಿಭಟನೆ ನಡೆಸಿದ ಇಬ್ಬರು ಬಿಜೆಪಿ ಶಾಸಕರ ಮೇಲೆ ಎಫ್ ​ಐಆರ್ ದಾಖಲಾಗಿದೆ. ಈ ಕುರಿತು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಗರಂ ಆಗಿದ್ದಾರೆ.

ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಹಿಂದೂ ಧರ್ಮದ ಅವಹೇಳನ ಪ್ರಕರಣ ಸಂಬಂಧ ಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ, ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ವಿರುದ್ಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಈ ಸಂಬಂಧ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ದ್ವಿಮುಖ ನೀತಿ, ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಶಾಲೆಯಲ್ಲಿ ಕೋಮು ಭಾವನೆ ಕೆರಳಿಸಿದ ಶಿಕ್ಷಕಿಯನ್ನ ಅಮಾನತುಗೊಳಿಸುವುದು ಬಿಟ್ಟು, ಸಾರ್ವಜನಿಕರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ಶಾಸಕರ ಮೇಲೆ ಕೇಸು ದಾಖಲಿಸಿಲಾಗಿದೆ. ಕಾನೂನು ಕ್ರಮ ಕೈಗೊಂಡ ಶಿಕ್ಷಣಾಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಮತ ಬ್ಯಾಂಕ್​ ಗಾಗಿ ಕಾಂಗ್ರೆಸ್ ಹೀನ ರಾಜಕಾರಣ ಮಾಡುತ್ತಿದೆ ಎಂದು ತಿಳಿಸಿದರು.

ಈ ಹಿಂದೆ ಜಿಲ್ಲೆಯಲ್ಲಿ ಸುಂದರ್ ರಾಮ್ ಶೆಟ್ಟಿ ರಸ್ತೆ ಪ್ರಕರಣ ನಡೆದಾಗ ಅಲೋಶಿಯಸ್ ಶಾಲೆಯ ವಿದ್ಯಾರ್ಥಿಗಳನ್ನ ರಸ್ತೆಯಲ್ಲಿ ಕೂರಿಸಿ ಪ್ರತಿಭಟನೆ ಮಾಡಿದ್ರು. ಆಗ ಯಾವ ಕೇಸು ಹಾಕಲಿಲ್ಲ. ಆದರೆ ಈಗ ಶಾಸಕರಾದ ಭರತ್ ಶೆಟ್ಟಿ ಹಾಗು ವೇದವ್ಯಾಸ್ ಕಾಮತ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇದನ್ನ ನಾವು ಖಂಡಿಸುತ್ತೇವೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ನಾವು ಕಾಂಗ್ರೆಸ್ ಸರಕಾರದ ಎದುರು ಭಿಕ್ಷೆ ಬೇಡೋದಿಲ್ಲ. ಸಾರ್ವಜನಿಕವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್​ನ ಹಿಂದೂ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತೇವೆ. ಶಾಲೆಯಲ್ಲಿ ನಡೆದಿದ್ದು ಕಾಂಗ್ರೆಸ್ -ಬಿಜೆಪಿ ಅಥವಾ ಹಿಂದೂ -ಕ್ರೈಸ್ತರ ಹೋರಾಟ ಅಲ್ಲ. ತಮ್ಮ ಮಕ್ಕಳಿಗಾದ ಅನ್ಯಾಯದ ವಿರುದ್ಧ ಪೋಷಕರು ಪ್ರತಿಭಟಿಸಿದ್ದಾರೆ. ಆ ಹೋರಾಟಕ್ಕೆ ಬೆಂಬಲವಾಗಿ ಶಾಸಕರು ಬಂದಿದ್ದಾರೆ. ನಮ್ಮ ಎರಡು ಆಗ್ರಹಗಳಿವೆ. ಒಂದು ಅಧಿಕಾರಿಯನ್ನ ವಾಪಸ್ ಕರೆಸಿಕೊಳ್ಳಿ. ಮತ್ತೊಂದು ಶಾಸಕರ ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಕಟೀಲು ಒತ್ತಾಯಿಸಿದರು.