ಮನೆ ರಾಜಕೀಯ ಬಂಜಾರ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ: ಸಿಎಂ ಬೊಮ್ಮಾಯಿ‌

ಬಂಜಾರ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ: ಸಿಎಂ ಬೊಮ್ಮಾಯಿ‌

0

ಚಿಕ್ಕಬಳ್ಳಾಪುರ: ಬಂಜಾರ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗೆ ಸ್ಥಳೀಯ ಕಾಂಗ್ರೆಸ್ ನಾಯಕರ ಪ್ರಚೋದನೆಯಿದೆ. ನಾವು ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ಮೇಲೆ ಕಾಂಗ್ರೆಸ್ ನವರಿಗೆ ತಡೆದುಕೊಳ್ಳಲಾಗದೇ, ಈ ರೀತಿಯ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಬಂಜಾರ ಸಮುದಾಯದ ಮೀಸಲಾತಿಯನ್ನು ಸದಾಶಿವ ಆಯೋಗ ಶಿಪಾರಸ್ಸಿನ ಅನ್ವಯದಲ್ಲಿ ಮಾಡಿಲ್ಲ. ನಮ್ಮ ಸಚಿವ ಸಂಪುಟದ ಮೂಲಕ ಮಾಡಿದ್ದೇವೆ. ಅವರಿಗೆ ಎಸ್.ಸಿ ಯಿಂದ ತೆಗೆಯುತ್ತಾರೆ ಎಂಬ ಆತಂಕ ಇತ್ತು. ನಾನೇ ಆದೇಶವನ್ನು ಮಾಡಿ ಬೋವಿ, ಲಂಬಾಣಿ ಎಲ್ಲ ಸಮುದಾಯಗಳು ಎಸ್.ಸಿ ಯಲ್ಲಿಯೇ ಇರುತ್ತವೆ ಎಂದು ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. 3% ರಿಂದ 4.5% ಕೊಟ್ಟಿದ್ದೇವೆ. ಅವರ ಬೇಡಿಕೆಯಂತೆಯೇ ಸಮುದಾಯದ ರಕ್ಷಣೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಸುಮಾರು ಎರಡು ಲಕ್ಷ ಜನರಿಗೆ ಹಕ್ಕುಪತ್ರ ಕೊಡುತ್ತಿದ್ದೇವೆ. ಯಡಿಯೂರಪ್ಪನವರು ತಾಂಡಾ ಅಭಿವೃದ್ಧಿ ನಿಗಮ ಮಾಡಿ, ಮೂಲಭೂತ ಸೌಕರ್ಯ ಕೊಟ್ಟವರು. ಹೀಗಾಗಿ ಯಾವುದೇ ಹಿಂಸೆಗೆ ಅವಕಾಶ ಬೇಡ. ಏನೇ ಇದ್ದರೂ ಕುಳಿತು ಚರ್ಚೆ ಬೇಡ ಮಾಡೋಣ. ಬಂಜಾರ ಸಮುದಾಯವನ್ನು ಮೊದಲಿನಿಂದಲೂ ಬಿಜೆಪಿ ಸರ್ಕಾರ ರಕ್ಷಣೆ ಮಾಡಿಕೊಂಡು ಬಂದಿದೆ. ಮುಂದೆಯೂ ಕೂಡ ಅವರ ರಕ್ಷಣೆ ಮಾಡುತ್ತೇವೆ. ಈ ತರಹದ ತಪ್ಪು ದಾರಿಗೆ ಎಳೆಯುವ ಅವಕಾಶ ಮಾಡಿಕೊಡಬಾರದು. ಕಾಂಗ್ರೆಸ್ ಮಾಡುತ್ತಿರುವ ಕುಖೃತ್ಯವನ್ನು ನಾನು ಖಂಡಿಸುತ್ತೇನೆ ಎಂದರು.

ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಹಿಂಸೆ, ಕ್ಷೋಭೆ ಉಂಟು ಮಾಡುವುದು ಅತ್ಯಂತ ಖಂಡನೀಯ. ಒಂದು ರಾಷ್ಟ್ರೀಯ ಪಕ್ಷ ಮಾಡಿರುವಂತಹದ್ದು ಸಣ್ಣ ಕೆಲಸ. ಜನರ ಮಧ್ಯೆ ಜಗಳ ಹಚ್ಚುವ ಶಕುನಿ ಕಾಂಗ್ರೆಸ್ ಪಕ್ಷ ಎಂದರು.

ಫಲಿತಾಂಶವನ್ನು ಕಾದು ನೋಡಿ

ಸಿಎಂ ಸ್ವಕ್ಷೇತ್ರದಲ್ಲಿ ಗೆಲುವು ಸುಲಭವಿಲ್ಲ ಎಂಬ ಡಿ.ಕೆ ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ನಾವು ರಾಜಕಾರಣದಲ್ಲಿ ಆಳವಾಗಿ ಬೇರೂರಿರುವ ಮರ. ರೆಂಬೆ ಕೊಂಬೆಗಳಲ್ಲ. ಇಂತಹ ಬಂಡ ಬಡಾಯಿಗೆ ನಾವು ಜಗ್ಗುವುದಿಲ್ಲ. ಯಾರೆಲ್ಲ ಬರುತ್ತಾರೆ ಬರಲಿ. ನನ್ನ ಕ್ಷೇತ್ರ ಸೇರಿದಂತೆ ಯಾವೆಲ್ಲ ಕ್ಷೇತ್ರದಲ್ಲಿ ಯಾರೆಲ್ಲ ಗೆಲ್ಲುತ್ತಾರೆ ಎನ್ನುವುದನ್ನು ಡಿ.ಕೆ ಶಿವಕುಮಾರ ಕಾದು ನೋಡಲಿ ಎಂದರು.

ವೈದ್ಯಕೀಯ ಕಾಲೇಜು ಅವಶ್ಯಕತೆಯನ್ನು ಈಡೇರಿಸಿದ್ದೇವೆ

ಇಲ್ಲಿ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇತ್ತು. ಡಾ. ಸುಧಾಕರ್ ಅವರು ಇಲ್ಲಿ ಮೆಡಿಕಲ್ ಕಾಲೇಜು ಬೇಕು ಎಂದು ಹಠದಿಂದಲೇ ಸಚಿವರಾಗಿದ್ದರು. ಅದರಂತೆ ಮಂಜೂರಾತಿ ಪಡೆದುಕೊಂಡು ಮೂರು ವರ್ಷದಲ್ಲಿ ಅದ್ಭುತವಾಗಿ ಮೆಡಿಕಲ್ ಕಾಲೇಜು ಕಟ್ಟಿದ್ದಾರೆ. ಎರಡು ವರ್ಷದ ವಿದ್ಯಾರ್ಥಿಗಳಿದ್ದಾರೆ. ಇದೊಂದು ಟಾಪ್ ಒನ್ ಮೆಡಿಕಲ್ ಕಾಲೇಜು ಆಗಲಿ. ಸುಧಾಕರ್ ಅವರ ಛಲ ಮತ್ತು ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.