ಮಂಡ್ಯ:ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಪ್ರಿಯತೆ ಕಂಡು ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ ಎಂದು ಕೇಂದ್ರದ ರಕ್ಷಣ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ನಡೆದ ಸಮಾವೇಶಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಸಚ್ಚಿದಾನಂದ ಪರ ಪ್ರಚಾರ ಭಾಷಣ ಮಾಡಿದ ಅವರು, ಪ್ರಧಾನಿ ನರೇಂದ್ರಮೋದಿಯವರ ಕಾರ‌್ಯವೈಖರಿಂದಾಗಿ ಕೇಂದ್ರದಲ್ಲಿ ನಮಗೆ ಸ್ಥಾನ ಇಲ್ಲ ಎಂದು ಕಾಂಗ್ರೆಸ್ಸಿಗರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸ್ಥಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ಜನರ ಮನಸ್ಸನ್ನು ಧರ್ಮದ ಹೆಸರಲ್ಲಿ ಒಡೆಯುವ ಹುನ್ನಾರ ಮಾಡುತ್ತಿದೆ. ನಾವು ಜನರನ್ನು ಜೋಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದರಿಂದಾಗಿ ನಮ್ಮಪ್ರಧಾನಿ ಬಗ್ಗೆ ವಿಷ ಸರ್ಪದ ಮಾತುಗಳನ್ನಾಡುತ್ತಾರೆ. ನಮ್ಮ ಪ್ರಧಾನಿ ಎಂದೂ ಯಾರ ಬಗ್ಗೆಯೂ ತುಚ್ಛವಾಗಿ ಮಾತನಾಡಿಲ್ಲ. ಮೋದಿ ಜನಪ್ರಿಯತೆ ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ.ಆ ಹೊಟ್ಟೆ ಉರಿ, ಹಸಾಶೆಗೆ ಈ ರೀತಿ ವರ್ತನೆ ತೋರುತ್ತಿದ್ದಾರೆ.ಭಗವಂತ ಅವರಿಗೆ ಹೊಟ್ಟೆ ಉರಿ ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಬೇಡುತ್ತೇನೆ ಎಂದು ತಿಳಿಸಿದರು.
2008ರಲ್ಲಿ ಯಾರಿಗೂ ಬಹುಮತ ಬರಲಿಲ್ಲ.ಅತಂತ್ರ ಸರ್ಕಾರದಿಂದಾಗಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈ ಬಾರಿಯೂ ಅತಂತ್ರ ಸರ್ಕಾರ ಬರಬಾರದು ಎಂಬುದು ನನ್ನ ಭಾವನೆ. ಇಡೀ ಪ್ರಪಂಚದಲ್ಲಿ ಭಾರತ ಸರ್ಕಾರದ ಕೆಲಸ ಅವಿಸ್ಮರಣೀಯವಾಗಿಗದೆ. ಮೋದಿ ನೇತೃತ್ವದಲ್ಲಿ ವಿಶ್ವವೇ ಮೆಚ್ಚುವ ಆಡಳಿತ ನೀಡುತ್ತಿದೆ ಎಂದರು.
ಆರ್ಟಿಕಲ್ 370ಯನ್ನು ರದ್ದುಪಡಿಸಿ ಕಾಶ್ಮೀರವನ್ನು ಭಾರತದಲ್ಲೇ ಉಳಿಸಿಕೊಂಡಿದ್ದೇವೆ.ನಾವು ಹೇಳಿದಂತೆ ನಡೆದುಕೊಳ್ಳುವ ಪಕ್ಷ ನಮ್ಮದು ಎಂದ ಅವರು, ದೇಶದಲ್ಲಿ ಬಾಂಬ್ ಹಾಕಿ ಗೊಂದಲ ಸೃಷ್ಠಿಸುತ್ತಿದ್ದ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದಿದ್ದೇವೆ. ಈಗ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಎಲ್ಲರೂ ಬಂದು ನೋಡಬಹುದು ಎಂದು ಹೇಳಿದರು.
ಆತ್ಮನಿರ್ಭರ ಭಾರತ ಶಸ್ತ್ರಾಸ್ತ್ರ :
ಸೇನೆಗೆ ಒದಗಿಸಲಾಗುತ್ತಿದ್ದ ಪ್ರತಿಯೊಂದು ಶಸ್ತ್ರಾಸ್ತ್ರಗಳನ್ನು ನಾವು ಬೇರೆ ಬೇರೆ ದೇಶಗಳಿಂದ ತರಿಸಿಕೊಳ್ಳಬೇಕಿತ್ತು. ಪ್ರಧಾನಿ ನರೇಂದ್ರಮೋದಿಯವರು ನಮ್ಮಲ್ಲೇ ಸ್ವಂತ ತಯಾರಿಸುವಂತಹ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಿ ಎಲ್ಲ ಕ್ಷೇತ್ರಗಳಲ್ಲೂ ಆತ್ಮನಿರ್ಭರ ಭಾರತವಾಗುತ್ತಿದೆ. ತುಮಕೂರಿನಲ್ಲಿ ಸೇನೆಗೆ ಅಗತ್ಯವಾದ ಹೆಲಿಕ್ಯಾಪ್ಟರ್ ನಿರ್ಮಾಣ ಕಾರ್ಖಾನೆ ಸಜ್ಜುಗೊಂಡಿದೆ. ನಮ್ಮ ಹೆಲಿಕ್ಯಾಪ್ಟರ್‌ಗಳನ್ನು ಬೇರೆಬೇರೆ ದೇಶಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ಬಂದು ನಿಂತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.
ಹಿಂದೆ ಭಾರತಕ್ಕೆ ಗೌರವವಿರಲಿಲ್ಲ. ಯಾವ ದೇಶವೂ ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಈಗ ಪ್ರಧಾನಿ ನರೇಂದ್ರಮೋದಿಯವರ ಕಾರ‌್ಯವೈಖರಿಯಿಂದ ಪ್ರತಿಯೊಂದು ದೇಶವೂ ಭಾರತದ ಮಾತನ್ನು ಕೇಳುತ್ತಿವೆ. ವಿಶ್ವ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿದೆ. ಭಾರತದ ಪ್ರಧಾನಿ ಮಾತಿಗೆ ಎಲ್ಲರೂ ಕಾಯುವಂತಾಗಿದೆ ಎಂದು ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭದ ದಿನಗಳಲ್ಲಿ ಭಾರತದ 22 ಸಾವಿರ ವಿದ್ಯಾರ್ಥಿಗಳು ಅಲ್ಲಿ ಅತಂತ್ರ ಸ್ಥಿತಿಯಲ್ಲಿದ್ದರು. ಅವರನ್ನು ಭಾರತಕ್ಕೆ ಕರೆತರುವ ಸಲುವಾಗಿ ರಷ್ಯಾ, ಉಕ್ರೇನ್, ಅಮೆರಿಕಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಸುರಕ್ಷಿತವಾಗಿ ನಮ್ಮವರನ್ನು ಸ್ವದೇಶಕ್ಕೆ ತರುವಲ್ಲಿ ಪ್ರಧಾನಿ ನರೇಂದ್ರಮೋದಿಯವರ ಕಾರ‌್ಯ ದೊಡ್ಡದು. ಈಗ ಸುಡನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಯುದ್ದೋನ್ಮಾಧದಿಂದಾಗಿ ಅಲ್ಲಿರುವ ಭಾರತೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ.ಆಪರೇಷನ್ ಕಾವೇರಿ ಯೋಜನೆ ರೂಪಿಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಆರ್. ಅಶೋಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ರಾಜ್ಯ ಕಾರ‌್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಸಂಸದೆ ಸುಮಲತಾ ಅಂಬರೀಶ್, ಅಭ್ಯರ್ಥಿ ಎಸ್. ಸಚ್ಚಿದಾನಂದ, ಮುಖಂಡ ಕೆ.ಎಸ್. ನಂಜುಂಡೇಗೌಡ, ತಾಲೂಕು ಅಧ್ಯಕ್ಷ ರಮೇಶ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.