ಚಿತ್ರದುರ್ಗ: ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಒಂದೇ ಆಗಿದೆ. ಭ್ರಷ್ಟಾಚಾರವನ್ನು ಹೆಚ್ಚಿಸುವ, ಕುಟುಂಬ ರಾಜಕಾರಣ ಮಾಡುವ ಈ ಪಕ್ಷಗಳಿಂದ ಕರ್ನಾಟಕದ ಅಭಿವೃದ್ಧಿ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಇಂದು ಚಿತ್ರದುರ್ಗಕ್ಕೆ ಆಗಮಿಸಿ ಪ್ರಚಾರ ಸಭೆ ನಡೆಸಿದರು. ಬಳಿಕ ಚಿತ್ರದುರ್ಗದ ಬಿಜೆಪಿಯ ಬೃಹತ್ ಚುನಾವಣಾ ಸಮಾವೇಶವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್-ಜೆಡಿಎಸ್ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯನ್ನು ಆ ಎರಡೂ ಪಕ್ಷಗಳು ಯೋಚಿಸಿರಲಿಲ್ಲ, ನಿರ್ಲಕ್ಷಿಸಿದ್ದವು. ಆದರೆ ಬಿಜೆಪಿ ಇದನ್ನು ಪೂರ್ಣಗೊಳಿಸುವ ಉದ್ದೇಶದಿಂದ ಬಜೆಟ್ ನಲ್ಲಿ 5,500 ಕೋಟಿ ಅನುದಾನ ನೀಡಿದೆ. ಇದರಿಂದ ಚಿತ್ರದುರ್ಗದ ಲಕ್ಷಾಂತರ ರೈತರಿಗೆ ಇದು ಲಾಭ ಆಗಲಿದೆ. ವಾಣಿ ವಿಲಾಸ ಸಾಗರಣ ಆಧುನೀಕರಣವೂ ಆಗಲಿದೆ ಎಂದರು.
ಕಾಂಗ್ರೆಸ್, ಜೆಡಿಎಸ್ ಆಡಳಿತದಲ್ಲಿದ್ದಾಗ ಎಲ್ಲಾ ಯೋಜನೆಗಳು ರಿವರ್ಸ್ ಗೇರ್ ನಲ್ಲಿದ್ದವು, ಬಹಳ ನಿಧಾನ ಇದ್ದವು. ಆದರೆ ಡಬಲ್ ಇಂಜಿನ್ ಸರ್ಕಾರದಲ್ಲಿ ಎಲ್ಲ ಕೆಲಸ ಕಾರ್ಯಕ್ರಗಳು, ವೇಗದಿಂದ ನಡೆದಿವೆ. ರೈಲ್ವೇ, ಹೈವೇ, ಏರ್ಪೋರ್ಟ್ ಗೆ ಅನುದಾನ ನೀಡಿದೆ. 3,500 ಕೋಟಿ ರೂಗೂ ಹೆಚ್ಚು ಅನುದಾನವನ್ನು ಚಿತ್ರದುರ್ಗ ಹೈವೇಗೆ ನೀಡಲಾಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆಯ ರೈಲ್ವೇ ಲೈನ್ ಕೆಲಸಗಳೂ ನಡೆಯುತ್ತಿವೆ. ಡಬಲ್ ಇಂಜಿನ್ ಸರ್ಕಾರದಿಂದ ಉದ್ಯೋಗದ ವಿಕಾಸ ಆಗಲಿದೆ.
ದೊಡ್ಡ ಸಂಖ್ಯೆಯಲ್ಲಿ ಎಲ್ಲರೂ ಬಿಜೆಪಿಗೆ ಆಶೀರ್ವಾದ ಮಾಡಲು ಬಂದಿದ್ದೀರಿ. ಈ ಬಾರಿಯ ನಿರ್ಧಾರ ‘ಬಹುಮತದ ಬಿಜೆಪಿ ಸರ್ಕಾರ” ಎಂದರು.
ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಮೊದಲ ಚುನಾವಣೆ ಇದು. ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯ ಮಾಡುವ ಚುನಾವಣೆ ಆಗಿದೆ. ಮತ್ತೆ ಬಿಜೆಪಿ ಸರ್ಕಾರವನ್ನು, ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.
ಏಳು ಸುತ್ತಿನ ಕೋಟೆ ಈ ಚಿತ್ರದುರ್ಗ. ಬಿಜೆಪಿ ಸರ್ಕಾರದ ಯೋಜನೆಗಳು ಕೂಡಾ ಏಳು ಸುತ್ತಿನ ಕೋಟೆಯನ್ನು ರಚಿಸಿದೆ. ಇದು ಸುರಕ್ಷಾ ಕೋಟೆಯಾಗಿದೆ ಎಂದು ಏಳು ಯೋಜನೆಗಳನ್ನು ಪುನರುಚ್ಛರಿಸಿದರು.
ಅಹಿಂದ ಸಮಾಜಕ್ಕೆ ಬಿಜೆಪಿ ಯೋಜನೆಗಳು
ನಮ್ಮ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಹೋದರ ಸಹೋದರಿಯರಿಗೆ ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ಲಾಭ ಸಿಕ್ಕಿದೆ. ಅಟಲ್ ಬಿಹಾರ್ ವಾಜಪೇಯಿ ಸಂದರ್ಭದಲ್ಲಿ ಸಚಿವಾಲಯ ಆರಂಭಿಸಿದ ಹಾಗೆ,ರಾಜ್ಯ ಬಿಜೆಪಿ ಸರ್ಕಾರವೂ ಅನೇಕ ಲಾಭಗಳನ್ನು ನೀಡಿದೆ. ಆದಿವಾಸಿಗಳಿಗಾಗಿ ಬಂಜಾರ, ಲಂಬಾಣಿ ಜನರಿಗಾಗಿ ಆಸ್ತಿ ಹಕ್ಕು ಪತ್ರ ನೀಡಲಾಗಿದೆ. ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಲಾಗಿದೆ ಎಂದರು.
ಕಾಂಗ್ರೆಸ್ ಮೆಡಿಕಲ್ ಕಾಲೇಜುಗಳನ್ನು ಏನು ಮಾಡಿದೆ, ಅದರ ಎರಡು ಪಟ್ಟು ಕಾಲೇಜುಗಳನ್ನು ಬಿಜೆಪಿ ನಿರ್ಮಿಸಿದೆ. ಚಿತ್ರದುರ್ಗದಲ್ಲೂ ಹೊಸ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದೆ. ಉತ್ತಮ ಆರೋಗ್ಯ ಸಿಗುವುದಲ್ಲದೆ, ನಿಮ್ಮನೆಯ ಮಕ್ಕಳೂ ಕಲಿತು ವೈದ್ಯರಾಗಬಹುದು ಎಂದರು. ಕೇಂದ್ರದಿಂದ ಹೊಸ ನರ್ಸಿಂಗ್ ಕಾಲೇಜುಗಳ ನಿರ್ಮಾಣದ ಯೋಜನೆಯನ್ನೂ ಜಾರಿಗೆ ತಂದಿದೆ ಎಂದರು.,
ಬಿಜೆಪಿ ಬಡವರ ಮಕ್ಕಳನ್ನು ಗಮನದಲ್ಲಿಟ್ಟು, ಮೆಡಿಕಲ್ , ಇಂಜಿನಿಯರಿಂಗ್ ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲಿ ಅಂದರೆ ಕನ್ನಡ ಭಾಷೆಯಲ್ಲಿ ಬರೆಯುವ ಅವಕಾಶ ನೀಡಿದೆ. ರೈತರ ಮ್ಕಕಳಿಗಾಗಿ ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ನೀಡಿದೆ. ಕಾಂಗ್ರೆಸ್ ಸರ್ಕಾರ ಮಕ್ಕಳ ಯೂನಿಫಾರ್ಮ್ನಲ್ಲೂ ಭಷ್ಟಾಚಾರ ಮಾಡಿತ್ತು. ಆದ್ರೆ ಬಿಜೆಪಿ ಆದಿವಾಸಿ ಮಕ್ಕಳ ಶಿಕ್ಷಣಕ್ಕೂ ವಿಶೇಷ ಒತ್ತು ನೀಡಿದೆ. 400 ಕ್ಕೂ ಹೆಚ್ಚು ಏಕಲವ್ಯ ಶಾಲೆಗಳನ್ನು ತೆರೆಯಲಾಗಿದೆ ಎಂದರು. ಬಿಜೆಪಿ ಐದು ಪಟ್ಟು ಹೆಚ್ಚು ಅನುದಾನ ನೀಡಿದೆ ಎಂದರು.
ಕಾಂಗ್ರೆಸ್ ಉಗ್ರವಾದಿಗಳನ್ನು ಬೆಂಬಲಿಸುತ್ತದೆ
ಕರ್ನಾಟಕ ಜನರಿಗೆ ಕಾಂಗ್ರೆಸ್ ನ ಇತಿಹಾಸ ಅವರ ಚಿಂತನೆ ಯಾರೂ ಮರೆಯಬಾರದು. ಆತಂಕವಾದಿಗಳಿಗೆ ಬೆಂಬಲ ನೀಡಿದೆ. ಬಾಟ್ಲಾ ಹೌಸ್ ಎನ್ಕೌಂಟರ್ ಉಗ್ರವಾದಿ ಸತ್ತಾಗ ಕಾಂಗ್ರೆಸ್ ನಾಯಕರ ಕಣ್ಣಲ್ಲಿ ಕಣ್ಣೀರು ಬಂದಿತ್ತು, ಆದರೆ ಸರ್ಜಿಕಲ್ ಸ್ಟ್ರೈಕ್ ಆದಾಗ ನಮ್ಮ ಯೋಧರನ್ನೇ ಅನುಮಾನ ಪಟ್ಟರು. ಕರ್ನಾಟಕದಲ್ಲೂ ಕಾಂಗ್ರೆಸ್ ಆತಂಕವಾದಿಗಳ ಪರ ಇತ್ತು. ಉಗ್ರ ಘಟನೆಗಳು ನಡೆದಾಗ ಅವರ ಪರ ಕಾಂಗ್ರೆಸ್ ಮಾತಾಡಿದೆ. ಆದರೆ ಬಿಜೆಪಿ ಇದೆಲ್ಲವನ್ನು ದಮನ ಮಾಡಿದೆ ಎಂದರು.