ಬೆಂಗಳೂರು : ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ ನಡೆಸುತ್ತಿರುವ ಕೋಗಿಲು ಲೇಔಟ್ನ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಮೊದಲು ಅವರ ನಿವಾಸಕ್ಕೆ ನೋಟಿಸ್ ನೀಡಲಾಗಿದೆ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಕರ್ನಾಟಕ ಸರ್ಕಾರ ಕೋಗಿಲು ಲೇಔಟ್ನಲ್ಲಿ ಧ್ವಂಸ ಕಾರ್ಯಾಚರಣೆಯನ್ನು ಮುಂದುವರಿಸಲು ಎರಡು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. “ಮೊದಲನೆಯದಾಗಿ, ಆ ಭೂಮಿ ಸರ್ಕಾರಕ್ಕೆ ಸೇರಿದ್ದು, ಜನರು ಅಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಎರಡನೆಯದಾಗಿ, ಅದು ಕಸದ ತೊಟ್ಟಿಯಾಗಿತ್ತು ಮತ್ತು ವಿಷಕಾರಿ ತ್ಯಾಜ್ಯವು ನೀರನ್ನು ಕಲುಷಿತಗೊಳಿಸಿತ್ತು. ಆದ್ದರಿಂದ ಅದು ಜನರು ವಾಸಿಸಲು ಯೋಗ್ಯವಾದ ಸ್ಥಳವಾಗಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಕೋಗಿಲು ಬಡಾವಣೆಯ ನಿವಾಸಿಗಳಿಗೆ ಸರಿಯಾದ ಸಮಯಕ್ಕೆ ನೋಟಿಸ್‌ಗಳನ್ನು ನೀಡಲಾಗಿದೆ. ಅಲ್ಲಿನ ಜನರು ಬಡವರು ಎಂಬ ಒಂದೇ ಕಾರಣಕ್ಕೆ ಈ ಸಮಸ್ಯೆಯನ್ನು ರಾಜಕೀಯವಾಗಿ ಬಿಂಬಿಸುವುದರಲ್ಲಿ ಅರ್ಥವಿಲ್ಲ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಕೋಗಿಲು ಲೇಔಟ್ ನಿವಾಸಿಗಳಿಗೆ ಸರ್ಕಾರ ತಾತ್ಕಾಲಿಕ ವಸತಿ ಒದಗಿಸುವ ನಿರ್ಧಾರ ತೆಗೆದುಕೊಂಡಿದೆ. 5ರಿಂದ 6 ತಿಂಗಳೊಳಗೆ ಶಾಶ್ವತ ವಸತಿ ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ.















