ಮನೆ ರಾಜಕೀಯ ಬಿಜೆಪಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಖಂಡನೀಯ: ಸಿದ್ದರಾಮಯ್ಯ

ಬಿಜೆಪಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಖಂಡನೀಯ: ಸಿದ್ದರಾಮಯ್ಯ

0

ಬೆಂಗಳೂರು (Bengaluru)- ಬಿಜೆಪಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಟ್ವೀಟ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಿಗ್ನೇಶ್‌ ಮೆವಾನಿ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅವರಿಗೆ ಜಾಮೀನು ದೊರೆತಿದೆ. ಈ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ.

ಸುಳ್ಳು ಆರೋಪದ ಮೇಲೆ ಗುಜರಾತ್ ಶಾಸಕ ಮತ್ತು ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿರುವ ಬಿಜೆಪಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಅತ್ಯಂತ ಖಂಡನೀಯ. ರಾಜಕೀಯ ವಿರೋಧಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಈ ರೀತಿ ಬಾಯಿಮುಚ್ಚಿಸುವುದು ಸರ್ವಾಧಿಕಾರಿ ಧೋರಣೆ ಎಂದು ಖಂಡಿಸಿದ್ದಾರೆ.

ಯಾವುದೇ ಹೇಳಿಕೆಗಳಿಂದ ಯಾರಿಗಾದರೂ ಮಾನಹಾನಿಯಾಗಿದ್ದರೆ ಸಂಬಂಧಿತರಿಗೆ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅವಕಾಶ ಇದೆ. ಇದರ ಬದಲಿಗೆ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಫ್ಯಾಸಿಸ್ಟ್ ಬುದ್ದಿ. ಭಾರತದಲ್ಲಿ ಇದು ನಡೆಯದು ಎಂದಿದ್ದಾರೆ.

ದೇಶವನ್ನು ಪ್ರೀತಿಸುವ, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರೂ ಜಿಗ್ನೇಶ್ ಮೇವಾನಿ ಜೊತೆ ಇದ್ದಾರೆ. ಒಬ್ಬ ಜಿಗ್ನೇಶ್‌ರನ್ನು ಜೈಲಿಗೆ ಕಳಿಸಿದ್ದೇವೆ ಎಂದು ಬೀಗುವುದು ಬೇಡ, ಈ ಬೆಳವಣಿಗೆಯಿಂದಾಗಿ ದೇಶದ ತುಂಬ ನೂರಾರು ಜಿಗ್ನೇಶರು ಹುಟ್ಟಿಕೊಂಡು ಹೋರಾಟವನ್ನು ಮುಂದುವರಿಸಲಿದ್ದಾರೆ ಎನ್ನುವುದು ನೆನಪಲ್ಲಿರಲಿ ಎಂದು ಎಚ್ಚರಿಸಿದ್ದಾರೆ.