ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ತೂಕ ಒಂದೆಡೆಯಾದರೆ, ಮತದಾನ ಮುಗಿದ ತಕ್ಷಣ ಬರುವ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ತೂಕವೇ ಮತ್ತೊಂದು. ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದರ ಸ್ಪಷ್ಟ ಚಿತ್ರಣ ಇಲ್ಲಿ ಸಿಕ್ಕಿಬಿಡುತ್ತದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಕಾಂಗ್ರೇಸ್ ಪಕ್ಷ ಮುನ್ನಡೆಯಲ್ಲಿದೆ.
ಚುನಾವಣೋತ್ತರ ಸಮೀಕ್ಷೆಗೆ ಯಾಕೆ ಇಷ್ಟು ಮಹತ್ವ?
ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆಗಳಿಗೆ ಯಾಕೆ ಇಷ್ಟು ಮಹತ್ವವೆಂದರೆ, ಕೆಲವೊಂದು ಸಮೀಕ್ಷೆಗಳು ಅತ್ತಿತ್ತ ಆದರೂ, ಪಕ್ಷಗಳು ಗಳಿಸಲಿರುವ ಸಂಖ್ಯೆಗಳು ಸ್ವಲ್ಪ ಆಚೆ ಈಚೆ ಆದರೂ ಬಹುತೇಕ ಸಮೀಕ್ಷೆಗಳು ನಿಖರವಾಗಿರುತ್ತವೆ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ನಿಖರವಾಗಿರುತ್ತವೆ ಮತ್ತು ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂಬ ಲೆಕ್ಕಾಚಾರಗಳು ಶುರುವಾಗುತ್ತವೆ. ರೆಸಾರ್ಟ್ ರಾಜಕೀಯ, ಕುದುರೆ ವ್ಯಾಪಾರ, ಕಿಂಗ್ ಮೇಕರ್ ಗಳಿಗೆ ಭರ್ಜರಿ ಬೇಡಿಕೆ ಇತ್ಯಾದಿ ಚಟುವಟಿಕೆಗಳು ಗರಿಗೆದರುತ್ತವೆ. ಹೆಚ್ಚು ಸ್ಥಾನ ಗಳಿಸಿದ ಪಕ್ಷದ ಒಬ್ಬೇ ಒಬ್ಬ ಶಾಸಕನೂ ಸಂಪರ್ಕಕ್ಕೆ ಸಿಗುವುದಿಲ್ಲ. ಅಥವಾ ಇಂಥ ಪಕ್ಷಕ್ಕೆ ಬಹುಮತ ದೊರೆಯುತ್ತದೆ ಎಂಬ ಸೂಚನೆ ಈ ಎಕ್ಸಿಟ್ ಪೋಲ್ ನಲ್ಲಿ ಸಿಕ್ಕ ಕೂಡಲೆ, ಯಾರು ಮುಖ್ಯಮಂತ್ರಿಯಾಗಬೇಕು, ಯಾರು ಸಂಪುಟ ಸೇರಬೇಕು, ಯಾರಿಗೆ ಯಾವ ಖಾತೆ ಸಿಗಬೇಕು ಇತ್ಯಾದಿಗಳ ಚರ್ಚೆ ಶುರುವಾಗುತ್ತದೆ. ಜೊತೆಗೆ, ಬಟ್ಟೆ ವ್ಯಾಪಾರಿಗಳಿಗೆ ಭರ್ಜರಿ ಬೇಡಿಕೆ. ಜುಬ್ಬಾ, ಪಂಚೆ, ಸೂಟು ಬೂಟು… ಯಾರಿಗುಂಟು ಯಾರಿಗಿಲ್ಲ?