ಬೆಂಗಳೂರು: ಕೆಆರ್ ಐಡಿಎಲ್ ಕಾಮಗಾರಿ ಸಂಬಂಧ ಸಚಿವರ ವಿರುದ್ಧ ಅಸಮಾಧಾನಗೊಂಡು ಸಿಎಂ ಸಿದ್ದರಾಮಯ್ಯಗೆ ಅಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅವರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಈ ಕುರಿತು ಮಾತನಾಡಿದ ಆರ್.ಅಶೋಕ್, ಸರ್ಕಾರದ ವಿರುದ್ದ ಕಾಂಗ್ರೆಸ್ ಶಾಸಕರೇ ದಂಗೆ ಎದ್ದಿದ್ದಾರೆ. ನಾವು ಇದನ್ನ ಮೊದಲಿನಿಂದಲೂ ಹೇಳುತ್ತಿದ್ದೇವೆ. ಬಿಆರ್ ಪಾಟೀಲ್ 2ನೇ ಬಾರಿ ಸಿಎಂಗೆ ಪತ್ರ ಬರೆದಿದ್ದಾರೆ. ಬಿ. ಆರ್ ಪಾಟೀಲ್ ರಂಥ ಧೈರ್ಯವಂತರು ಮಾತ್ರ ಮಾತನಾಡಿದ್ದಾರೆ. ಉಳಿದವರು ಹೆದರಿ ಕುಳಿತಿದ್ದಾರೆ. ಸಚಿವರು ಹೆದರಿಸುತ್ತಿದ್ದಾರೆ. ಮಂತ್ರಿಗಳ ಪಿಎಗಳೂ ಸಹ ದಂಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಿನ್ನೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದ ಶಾಸಕ ಬಿಆರ್ ಪಾಟೀಲ್, ಕೆಆರ್ ಐಡಿಎಲ್ ಗೆ ನೀಡಿದ್ದ ಕಾಮಗಾರಿಗಳ ಸಂಬಂಧ ನನ್ನ ವಿರುದ್ದ ಲಂಚ ಪಡೆದು ಕಾಮಗಾರಿಗಳನ್ನ ನೀಡಿದ್ದಾರೆ ಎಂಬ ಆರೋಪ ಬಂದಿದೆ. ಇಂಥ ಆರೋಪಗಳನ್ನ ಹೊತ್ತು ಆಧಿವೇಶನಕ್ಕೆ ಬರುವುದು ಸರಿಯಲ್ಲ. ಅಧಿವೇಶನಕ್ಕೆ ಬಂದರೆ ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ನನ್ನ ವಿರುದ್ದದ ಆರೋಪಗಳ ಸಂಬಂಧ ತನಿಖೆಗೆ ಆದೇಶಿಸಿ. ಆರೋಪ ಸತ್ಯಾಸತ್ಯತೆ ಹೊರಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೇ ರಾಜೀನಾಮೆಗೆ ಸಿದ್ದನಿದ್ದೇನೆ ಎಂದು ಬಿಆರ್ ಪಾಟೀಲ್ ಪತ್ರದಲ್ಲಿ ತಿಳಿಸಿದ್ದರು.