ಮೈಸೂರು(Mysuru): ವಿಧಾನಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ.
ನಗರದ ಮಹರ್ಷಿ ವಾಲ್ಮೀಕಿ ರಸ್ತೆಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಲಾಗುತ್ತಿದೆ.
ಮಧ್ಯಾಹ್ನ 1.10ರ ವೇಳೆಗೆ ಎಣಿಕೆಯಾಗಿರುವ ಮತಗಳ ಪ್ರಮಾಣವನ್ನು ಗಮನಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.
2ನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಇದೆ. 28 ಟೇಬಲ್‌ಗಳಲ್ಲಿ ಎಣಿಕೆ ನಡೆಯುತ್ತಿದ್ದು, ಪ್ರತಿ ಟೇಬಲ್‌ಗಳಲ್ಲೂ ನೂರು ಮತಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಬಹುತೇಕ ಮತಗಳು ಕಾಂಗ್ರೆಸ್ ಪಾಲಾಗಿವೆ. ಬಿಜೆಪಿಯಿಂದಲೂ ತೀವ್ರ ಪೈಪೋಟಿ ಕಂಡುಬಂದಿದೆ. ಜೆಡಿಎಸ್‌ನ ಎಚ್.ಕೆ. ರಾಮು 3ನೇ ಸ್ಥಾನದಲ್ಲಿದ್ದಾರೆ. ರೈತ- ದಲಿತ ಚಳವಳಿಗಳ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಅವರಿಗೂ ಪ್ರಥಮ ಪ್ರಾಶಸ್ತ್ಯದ ಮತಗಳು ಸಿಕ್ಕಿವೆ. ಪಕ್ಷೇತರರಲ್ಲಿ ಪ್ರಸನ್ನ ಮುಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿದವರು ಬಿಜೆಪಿಗೆ 2ನೇ ಪ್ರಾಶಸ್ತ್ಯದ ಮತಗಳನ್ನು ಕೊಟ್ಟಿರುವುದು ಕಂಡುಬಂದಿದೆ. ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿದವರಲ್ಲಿ ಹೆಚ್ಚಿನವರು 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್‌ಗೆ ನೀಡಿರುವುದನ್ನು ಗಮನಿಸಬಹುದಾಗಿದೆ.