ಬೆಂಗಳೂರು: ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ನೂರಾರು ಜನ ಬರ್ತಾರೆ, ನೂರಾರು ಜನ ಹೋಗುತ್ತಾರೆ. ಜಗದೀಶ್ ಶೆಟ್ಟರ್ ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾದ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ತೀವ್ರ ವಾಗ್ದಾಳಿ ನಡೆಸಿದರು.
ನೀತಿ, ಸಿದ್ಧಾಂತದಡಿ ರಾಜಕೀಯ ಮಾಡುವವರು ನಾವು. ಅಲ್ಪಸಂಖ್ಯಾತ ಸಮುದಾಯ ಶೆಟ್ಟರ್ ರನ್ನ ಒಪ್ಪಿರಲಿಲ್ಲ. ಇದರಿಂದ ನಮ್ಮ ಪಕ್ಷ ಸಂಘಟನೆಗೂ ಕಷ್ಟ ಆಗುತ್ತಿತ್ತು. ಶೆಟ್ಟರ್ ಹೋಗಿದ್ದೇ ಒಳ್ಳೆಯದು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಶೆಟ್ಟರ್ ಅವರು ನಮ್ಮ ಪಕ್ಷ ಬಂದು ಸೇರಿದ್ದರು. ಚುನಾವಣೆ ಮುಂಚಿತವಾಗಿ ನಮಗೆ ಕಾಂಗ್ರೆಸ್ ಅಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸ ಇತ್ತು. ಬಿಜೆಪಿ ವಿರುದ್ಧ ದೊಡ್ಡ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ನಮ್ಮ ಪಕ್ಷದ ಕಾರ್ಯಕರ್ತರ ಟಿಕೆಟ್ ಅವರಿಗಾಗಿ ನಾವು ತ್ಯಾಗ ಮಾಡಿದೆವು. ಮಾಜಿ ಸಿಎಂ ಎಂಬ ಘನತೆಗೆ ಗೌರವ ಕೊಟ್ಟು ಟಿಕೆಟ್ ನೀಡಿದೆವು. ಸೋತರೂ ಕೂಡ ಅವರನ್ನು ನಂಬಿ ನಾವು ಅವರನ್ನು ಎಂಎಲ್ಸಿ ಮಾಡಿದೆವು. ಏಕಾಏಕಿ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ದ ಅವರು ಆರೋಪ ಮಾಡಿದ್ದಕ್ಕೆ ಅವರೇ ಉತ್ತರ ಕೊಡಬೇಕು. ಬಿಜೆಪಿ ದೂರ ಇಡಬೇಕು ಅಂತ ನಾವು ಜೆಡಿಎಸ್ ಜೊತೆಗೆ ಸರ್ಕಾರ ಮಾಡಿದ್ದೆವು. ಆಪರೇಷನ್ ಕಮಲ ಮಾಡಿ ಯಾರು ಸಮ್ಮಿಶ್ರ ಸರ್ಕಾರ ತೆಗೆದರೋ ಅವರ ಜೊತೆಗೇ ಈಗ ಜೆಡಿಎಸ್ ತಬ್ಬಿಕೊಳ್ತಿಲ್ವಾ? ಬಿಜೆಪಿಯ ವಕ್ತಾರರಾಗಿಲ್ವಾ ಹೆಚ್ ಡಿ ಕುಮಾರಸ್ವಾಮಿ? ಹಾಗೆ ರಾಜಕಾರಣದಲ್ಲಿ ಎಲ್ಲವೂ ಆಗುತ್ತದೆ ಎಂದು ಹೇಳಿದರು.
‘ನಾನು ಕಾಂಗ್ರೆಸ್ಗೆ ವೈಯಕ್ತಿಕವಾಗಿ ಬಂದಿದ್ದೇನೆ. ಒಟ್ಟಿಗೆಯಾಗಿ ಕೆಲಸ ಮಾಡೋಣ’ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಸವದಿ ದೊಡ್ಡ ಅಂತರದಲ್ಲಿ ಚುನಾವಣೆ ಗೆದ್ದಿದ್ದಾರೆ. ಅವರು ನಮ್ಮ ನಾಯಕರಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಸವದಿಗೆ ಸಂಬಂಧಿಸಿದ ಆಪರೇಷನ್ ಕಮಲದ ಪ್ರಯತ್ನ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲರನ್ನೂ ಸೆಳೆಯಲು ಪ್ರಯತ್ನ ಮಾಡುತ್ತಾರೆ. ನಮಗೆ ಗೊತ್ತಿದೆ, ಆ ಬಗ್ಗೆ ನಾನು ಮಾತನಾಡಲ್ಲ. ನಾವು ಮುಂದಾದರೆ ಎಷ್ಟು ಮನೆಗಳು ಖಾಲಿಯಾಗಬಹುದು ಎಂದು ಅವರು ಯೋಚನೆ ಮಾಡಲಿ. ನಾವು ಕಾಂಗ್ರೆಸ್ನವರು ಸುಮ್ಮನೆ ಇದ್ದೀವಿ. ನಮ್ಮಿಂದ ಹೋದವರಿಗೆ ಯಾವ ಸಿದ್ಧಾಂತ ಕೊಟ್ಟಿದ್ದಾರೆ ಬಿಜೆಪಿಯವರು? ಅವರೆಲ್ಲ ಬಿಜೆಪಿಯ ಸಿದ್ಧಾಂತ ಒಪ್ಪಿದ್ದಾರಾ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.