ಮನೆ ರಾಜ್ಯ ಕಾಂಗ್ರೆಸ್ ಪಕ್ಷದ ಕೊಡುಗೆ ದೇಶಕ್ಕೆ ಏನೂ ಇಲ್ಲ‌: ಹಿಮಂತ್ ಬಿಸ್ವಾ ಶರ್ಮಾ

ಕಾಂಗ್ರೆಸ್ ಪಕ್ಷದ ಕೊಡುಗೆ ದೇಶಕ್ಕೆ ಏನೂ ಇಲ್ಲ‌: ಹಿಮಂತ್ ಬಿಸ್ವಾ ಶರ್ಮಾ

0

ಗಂಗಾವತಿ: ಸ್ವಾತಂತ್ರ್ಯದ ನಂತರ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಕೊಡುಗೆ ದೇಶಕ್ಕೆ ಏನೂ ಇಲ್ಲ‌. ಸಂಸ್ಕೃತಿ ಹಾಗೂ ಧರ್ಮ ರಕ್ಷಣೆಯಲ್ಲಿ ಬಿಜೆಪಿ ಕೊಡುಗೆ ಹಿರಿದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅಭಿಪ್ರಾಯಪಟ್ಟರು.

ನಗರದ ಗಾಂಧಿ ವೃತ್ತಕ್ಕೆ ಸೋಮವಾರ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯ ವಾಹನದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್, ಗುಜರಾತ್, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವೇ ಇಲ್ಲದಂತೆ ಮಾಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮಾತನಾಡಿ, ಗಂಗಾವತಿ ಕ್ಷೇತ್ರ ವಿಜಯನಗರ ಸಾಮ್ರಾಜ್ಯದ ಗಂಡು ಮೆಟ್ಟಿದ ನಾಡು. ಇಲ್ಲಿ ಸದ್ಯ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಅದನ್ನು ಬೆಳಸಬಾರದು ಎಂಬ ಉದ್ದೇಶದಿಂದ ಸುಮ್ಮನಿರುವೆ ಎಂದರು.

ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಜನರು ಶಪಥ ಮಾಡಬೇಕು. ಆಂಜನೇಯ ಸಂಜೀವಿನಿ ತರಲು ಪರ್ವತ ಹೇಗೆ ತಂದರೋ, ನಾವೆಲ್ಲ ಬಿಜೆಪಿ ಗೆಲ್ಲಿಸಲು ಬೆಟ್ಟದಂತೆ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ ಹನುಮನ ಜನ್ಮಸ್ಥಳದ ಅಭಿವೃದ್ಧಿಗೆ ಸಿಎಂ ಮಂಗಳವಾರ ₹120 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಇಲ್ಲಿ ಧರ್ಮ ಗೆಲ್ಲಬೇಕು. ಶಾಸಕ ಪರಣ್ಣ ಮುನವಳ್ಳಿ ಕೆರೆ ತುಂಬಿಸುವ ಯೋಜನೆ, ನಿವೇಶನ, ರಸ್ತೆ ಸೇರಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕು ಎಂದರು.

400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಯಾತ್ರೆಯು ಪಟ್ಟಣದ ಸಿಬಿಎಸ್ ವೃತ್ತದಿಂದ ಆರಂಭವಾಗಿ ಗಾಂಧಿ ವೃತ್ತ ತಲುಪಿತು.

ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಗಿರೇಗೌಡ, ನೆಕ್ಕಂಟಿ ಸೂರಿಬಾಬು, ನಗರ ಯೋಜನಾ ಪ್ರಾಧಿಕಾರದ ರಾಘವೇಂದ್ರ ಶೆಟ್ಟಿ, ಕಳಕನಗೌಡ, ಸಿದ್ದರಾಮಯ್ಯಸ್ವಾಮಿ ಸೇರಿ ಮುಖಂಡರು ಇದ್ದರು.