ಬಾಗಲಕೋಟೆ: ಚುನಾವಣೆ ಬಂದಾಗಲಷ್ಟೇ ಕಾಂಗ್ರೆಸ್ ನವರಿಗೆ ಲಿಂಗಾಯತರು ನೆನಪಾಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಮಂಗಳವಾರ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ನಾಯಕ ಎಸ್.ಆರ್. ಪಾಟೀಲ ಕಡೆಗಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
1967ರ ನಂತರ ರಾಜ್ಯದಲ್ಲಿ ಲಿಂಗಾಯತ ಮುಖ್ಯಮಂತ್ರಿ ಮಾಡಿಲ್ಲ. ವೀರೇಂದ್ರ ಪಾಟೀಲ ಅವರನ್ನು ಅವಮಾನ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು ಎಂದು ಟೀಕಿಸಿದರು.
ಲಿಂಗಾಯತ ಸಮಾಜವನ್ನು ಒಡೆಯಲು ಹೊರಟವರಿಗೆ ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ. 2009ರಲ್ಲಿಯೇ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದರು. ಆ ಪ್ರಸ್ತಾವವನ್ನು ಕಾಂಗ್ರೆಸ್ ಸರ್ಕಾರ ತಿರಸ್ಕರಿಸಿತ್ತು. ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸಿದೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಜಿಲೇಬಿಯೇ ಎಂದು ಫೈಲ್ ಇರುತ್ತಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಹಿನ್ನಡೆಗೂ ಕಾಂಗ್ರೆಸ್ ಕಾರಣ ಎಂದು ದೂರಿದರು.
ಬಿಜೆಪಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಜಗದೀಶ ಶೆಟ್ಟರ್ ಪಕ್ಷ ಬಿಟ್ಟಿರುವುದರಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರಿಗೆ ಟಿಕೆಟ್ ಸಿಗದಿರಲು ಬಿ.ಎಲ್. ಸಂತೋಷ ಕಾರಣ ಎಂಬ ಆರೋಪವೂ ಸರಿಯಲ್ಲ ಎಂದು ಹೇಳಿದರು.
ಮುಧೋಳ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.