ಮನೆ ರಾಜಕೀಯ ಕಾಂಗ್ರೆಸ್‍ನವರು ಭ್ರಷ್ಟಾಚಾರದ ಪಿತಾಮಹರು, ತೇಜೋವಧೆಗೆ ಸೊಪ್ಪು ಹಾಕುವುದಿಲ್ಲ: ಸಚಿವ ಡಾ.ಕೆ.ಸುಧಾಕರ್

ಕಾಂಗ್ರೆಸ್‍ನವರು ಭ್ರಷ್ಟಾಚಾರದ ಪಿತಾಮಹರು, ತೇಜೋವಧೆಗೆ ಸೊಪ್ಪು ಹಾಕುವುದಿಲ್ಲ: ಸಚಿವ ಡಾ.ಕೆ.ಸುಧಾಕರ್

0

ಚಿಕ್ಕಬಳ್ಳಾಪುರ: ಗುತ್ತಿಗೆದಾರ ಸಂತೋಷ್ ಅವರ ಸಾವಿನಲ್ಲಿ ರಾಜಕೀಯ ಬೆರೆಸಿ, ಸಚಿವ ಕೆ.ಎಸ್.ಈಶ್ವರಪ್ಪನವರ ಹಾಗೂ ರಾಜ್ಯ ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನವನ್ನು ಕಾಣದ ಕೈಗಳು ಮಾಡುತ್ತಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಇಲ್ಲಿ ದಾಳವಾಗಿ ಬಳಕೆಯಾಗಿದ್ದಾರೆ. ಕಾಂಗ್ರೆಸ್‍ನವರ ಈ ರೀತಿಯ ಟೊಳ್ಳು ಬೆದರಿಕೆಗೆ ಯಾವುದೇ ಸಚಿವರು ಅಂಜುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗುತ್ತಿಗೆದಾರ ಮೃತರಾಗಿರುವುದಕ್ಕೆ ದುಃಖವಿದೆ. ಆದರೆ ಈ ಸಾವು ಏಕೆ ಸಂಭವಿಸಿದೆ ಎಂಬುದು ತನಿಖೆ ಆಗದೆಯೇ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ. ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಕೂಡ ಬೇಕಿಲ್ಲ. ಕಾಂಗ್ರೆಸ್‍ನವರು ಎಷ್ಟು ಸತ್ಯ ಹರಿಶ್ಚಂದ್ರರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‍ನವರು ಯಾವ ಇಲಾಖೆಯಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಅಂಕಿ ಅಂಶಗಳನ್ನು ನಾವು ಕೂಡ ಕೊಡಬಹುದು ಎಂದರು.

ಓರ್ವ ವ್ಯಕ್ತಿ ಬರೆದ ಅನಾಮಧೇಯ ಪತ್ರ ಅಥವಾ ಆಧಾರ ರಹಿತ ದೂರಿಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ. ದಾಖಲೆಗಳೇ ಇಲ್ಲದೆ ಒಬ್ಬರನ್ನು ಗೇಲಿ ಮಾಡುವುದು ಅಥವಾ ಆರೋಪ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರ ಬಹಳ ಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಇಡೀ ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟುಹಾಕಿದ ಪಿತಾಮಹರೇ ಕಾಂಗ್ರೆಸ್ಸಿಗರು. ಭ್ರಷ್ಟಾಚಾರದ ಜನಕರೇ ಕಾಂಗ್ರೆಸ್‍ನವರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿ ಹೇಗೆ ಕೆಲಸ ಮಾಡಬೇಕೆಂದು ಅವರು ತೋರಿಸಿಕೊಟ್ಟಿದ್ದಾರೆ. ಭ್ರಷ್ಟಾಚಾರ ಇಲ್ಲ ಎಂದು ಕೂಡ ನಾನು ಹೇಳುತ್ತಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಭ್ರಷ್ಟಾಚಾರ ಹುಟ್ಟಿರುವುದಲ್ಲ. ಇದರ ನಿರ್ಮೂಲನೆಗೆ ಎಲ್ಲ ಪಕ್ಷಗಳು ಸೇರಿ ಚರ್ಚೆ ಮಾಡಬೇಕಿದೆ. ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಹಾಗೂ ನಿರ್ಮೂಲನೆ ಮಾಡುವುದೇ ಈಗಿನ ಸವಾಲು ಎಂದರು.

ತನಿಖಾ ವರದಿ ಬರಲಿ

ಕಾಂಗ್ರೆಸ್‍ನವರು ಏನು ಮಾಡುತ್ತಾರೆ ಎಂಬುದು ಈಗ ಮುಖ್ಯವಲ್ಲ. ತನಿಖೆ ನಂತರ ಸತ್ಯ ತಿಳಿದುಬರಲಿದೆ ಹಾಗೂ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಹಿಂದೆ ನಡೆದ ಡಿವೈಎಸ್‍ಪಿ ಗಣಪತಿ ಪ್ರಕರಣವೇ ಬೇರೆ, ಈಗಿನ ವಿಚಾರವೇ ಬೇರೆ. ವಾಟ್ಸಾಪ್ ನಲ್ಲಿ ಬಂದ ಸಂದೇಶ ಅವರಿಂದಲೇ ಬಂದಿದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ತನಿಖೆ ನಡೆಯುತ್ತಿರುವುದರಿಂದ ಕಾದು ನೋಡಬೇಕಿದೆ. ಸಾರ್ವಜನಿಕ ಬದುಕಿನಲ್ಲಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಸಿಲುಕಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ತನಿಖಾ ವರದಿ ಬಂದ ಬಳಿಕ ಪಕ್ಷದ ಮಟ್ಟದಲ್ಲಿ ಚರ್ಚಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.