ಬೆಂಗಳೂರು : ಹಲವು ವರ್ಷಗಳಿಂದ ಸಹಮತದೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದಲ್ಲದೇ ಕೊಲೆ ಯತ್ನ ನಡೆಸಿದ ಆರೋಪದಲ್ಲಿ ಪೊಲೀಸ್ ಆಧಿಕಾರಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೊರ್ಟ್ ನಿರಾಕರಿಸಿದೆ.
ಅಲ್ಲದೆ, ಈ ಪ್ರಕರಣವು ಸಂತ್ರಸ್ತೆಯ ಮೇಲೆ ಸ್ತ್ರೀದ್ವೇಷಿ ಕ್ರೌರ್ಯವನ್ನು ಬಿಂಬಿಸಲಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಸಹಮತದ ಲೈಂಗಿಕ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕಾಗಿ ಮಹಿಳಾ ಸಂತ್ರಸ್ತೆಯ ಮೇಲೆ ದೌರ್ಜನ್ಯವೆಸಗಲು ಪರವಾನಿಗೆ ನೀಡಿದಂತಾಗುವುದಿಲ್ಲ ಎಂದು ತಿಳಿಸಿದೆ.
ತಮ್ಮ ವಿರುದ್ಧ ಕೊಲೆ ಯತ್ನ ಮತ್ತು ದೌರ್ಜನ್ಯವೆಸಗಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಪೊಲೀಸ್ ಇಲಾಖೆಯ ಸರ್ಕಲ್ ಇನ್‌ಸ್ಪೆಕ್ಟರ್ ಬಿ. ಅಶೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಅತ್ಯಾಚಾರ ಆರೋಪವನ್ನು ರದ್ದುಪಡಿಸಿತು. ಆದರೆ, 2021 ನವೆಂಬರ್ 11ರಂದು ಏನು ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಕೊಲೆ ಯತ್ನ, ಹಲ್ಲೆ ಮತ್ತು ಬೆದರಿಕೆ ಆರೋಪಗಳನ್ನು ರದ್ದುಪಡಿಸಲು ನಿರಾಕರಿಸಿ, ವಿಚಾರಣಾ ಪ್ರಕ್ರಿಯೆ ಮುಂದುವರೆಯಲಿದೆ ಎಂದು ತಿಳಿಸಿದೆ. ಸಾಮಾಜಿಕ ಕಾರ್ಯಕರ್ತೆಯಾಗಿರುವ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ಸಂತ್ರಸ್ತೆಯಾಗಿದ್ದು, ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿದ್ದ ವೇಳೆ ಆರೋಪಿ ಇನ್‌ಸ್ಪೆಕ್ಟರ್ ಪರಿಯಚವಾಗಿತ್ತು.
ಇದಾದ ಕೆಲ ದಿನಗಳ ಬಳಿಕ ಅರ್ಜಿದಾರರ ವಿರುದ್ಧ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಲೈಂಗಿಕ ಕಿರುಕುಳ ಆರೋಪದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಹಿಂಪಡೆಯಬೇಕು. ಇಲ್ಲದಿದ್ದರೆ ನಿನ್ನ ಮಕ್ಕಳನ್ನು ಕೊಲೆ ಮಾಡುವುದಾಗಿ ಅರ್ಜಿದಾರ ಬೆದರಿಕೆ ಹಾಕಿದ್ದರು. ಇದರಿಂದ ಸಂತ್ರಸ್ತ ಮಹಿಳೆ ಮತ್ತೊಂದು ದೂರು ದಾಖಲಿಸಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಅರ್ಜಿದಾರ ಆರೋಪಿ 2021ರ ನವೆಂಬರ್ 11ರಂದು ಸಂಜೆ 7.30ರ ಸಮಯದಲ್ಲಿ ತನ್ನನ್ನು ಅಪಹರಣದಂತೆ ಎತ್ತಿಕೊಂಡು ಹೋಟೆಲ್‌ವೊಂದಕ್ಕೆ ಕರೆದೊಯ್ದು ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೆ ಹಲ್ಲೆ ಮಾಡಿದ್ದರು. ನಂತರ ಮುಂಜಾನೆ 2.40ರ ಸಮಯದಲ್ಲಿ ಸಾಗರ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಮೂರನೇ ದೂರು ದಾಖಲಿಸಿದ್ದರು. ಇದನ್ನು ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿದಾರರೇ ತಿಳಿಸಿರುವಂತೆ 2017 ರಿಂದ 2022ರ ಅವಧಿಯಲ್ಲಿ ಇಬ್ಬರ ಸಂಬಂಧ ಸಹಮತದಿಂದ ಕೂಡಿತ್ತು. ಅಲ್ಲದೆ, ಅರ್ಜಿದಾರ ಪೊಲೀಸ್ ಅಧಿಕಾರಿ ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ. ಇದೊಂದು ಒತ್ತಾಯಪೂರ್ವಕ ಸಹಮತದ ಸಂಬಂಧವಾಗಿದ್ದು, ಅತ್ಯಾಚಾರಕ್ಕೆ ಸಮವಾಗಲಿದೆ ಎಂದು ಪೀಠಕ್ಕೆ ತಿಳಿಸಿದರು. ಸರ್ಕಾರಿ ವಕೀಲರ ವಾದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ದೂರುದಾರರು ಅರ್ಜಿದಾರರ ವಿರುದ್ಧ ವಿನಾಕಾರಣದ ದೂರು ದಾಖಲಿಸುತ್ತಿದ್ದು, ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ಅಸ್ಪಷ್ಟವಾಗಿದೆ. ಅರ್ಜಿದಾರರ ವಿರುದ್ಧ ಯಾವುದೇ ಆರೋಪಗಳನ್ನು ಸಾಬೀತುಪಡಿಸಲು ಪುರಾವೆಗಳಿಲ್ಲ. ಹೀಗಾಗಿ ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು.














