ಕಲಬುರಗಿ: ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜೀವ ಜಾನೆ ಸೇರಿ ದಂತೆ ಮೂವರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಂದ್ರೆ ನಗರದ ನಿವಾಸಿ ಸಿದ್ರಾಮಯ್ಯ ಶಂಭುಲಿಂಗಯ್ಯ ಹಿರೇಮಠ ನೀಡಿದ ದೂರಿನ ಅನ್ವಯ ಸಂಜು ಶಾಹೀರ ಪಾಟೀಲ, ರಾಜೀವ ಜಾನೆ ಹಾಗೂ ಪತ್ರಕರ್ತ ಪ್ರವೀಣ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2024ರ ನವೆಂಬರ್ 15ರಂದು ಸಿದ್ರಾಮಯ್ಯ ಅವರು ಕಾರಿನಲ್ಲಿ ಹಳೇ ಜೇವರ್ಗಿ ರಸ್ತೆಯಲ್ಲಿ ಹೋಗುತ್ತಿದ್ದರು. ಮಹಿಳಾ ಪದವಿ ಕಾಲೇಜಿನಲ್ಲಿ ರಾಂಗ್ ಸೈಡ್ ನಿಂದ ಬೈಕ್ ಮೇಲೆ ಬಂದ ಸಂಜಯ, ಬಾಗಿಲು ತೆರೆಯುವಂತೆ ಕಾರಿನ ಗ್ಲಾಸ್ ಗೆ ಕೈಯಿಂದ ಹೊಡೆದರು. ಅವಾಚ್ಯ ಪದಗಳಿಂದ ಬೈದರು. ರಾಜು ಹಾಗೂ ಪ್ರವೀಣ್ ಅವರು ಸಂಜಯನನ್ನು ಕಳುಹಿಸಿದ್ದಾರೆ. ಸಂಜಯ ವಿರುದ್ಧ 11 ಕ್ರಿಮಿನಲ್ ಪ್ರಕರಣ ದಾಖಲಾಗಿವೆ ಎಂದು ಆರೋಪಿಸಿ ಸಿದ್ರಾಮಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.