ಮನೆ ಕಾನೂನು ಯುವತಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ಕಾನ್‌ ಸ್ಟೇಬಲ್‌ ಅಮಾನತು

ಯುವತಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ಕಾನ್‌ ಸ್ಟೇಬಲ್‌ ಅಮಾನತು

0

ಬೆಂಗಳೂರು: ಆರೋಪಿಯೊಬ್ಬನ ಜೊತೆಗೆ ಸೇರಿ ಯುವತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸದೇ ಚಾರ್ಜ್‌ ಶೀಟ್‌ ಸಲ್ಲಿಸಿದ ರಾಜರಾಜೇಶ್ವರಿನ ನಗರದ ಕಾನ್‌ ಸ್ಟೇಬಲ್‌ ನನ್ನು ಡಿಸಿಪಿ ಎಸ್‌.ಗಿರೀಶ್‌ ಅಮಾನತುಗೊಳಿಸಿದ್ದಾರೆ.

ಆರ್‌.ಆರ್‌.ನಗರ ಠಾಣೆಯಲ್ಲಿ ಬರಹಗಾರ (ರೈಟರ್‌) ಆಗಿದ್ದ ಯದುಕುಮಾರ್‌ ಅಮಾನತುಗೊಂಡ ಕಾನ್‌ ಸ್ಟೇಬಲ್‌.

ಯುವತಿಯೊಬ್ಬಳ ಖಾಸಗಿ ಫೋಟೋ ಇಟ್ಟುಕೊಂಡು ಬೆದರಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಆರೋಪಿಯು ಬಿಡುಗಡೆಯಾದ ನಂತರ ಅಮಾನತುಗೊಂಡಿರುವ ಕಾನ್‌ ಸ್ಟೇಬಲ್‌ ಯದುಕುಮಾರ್‌ ನನ್ನು ಭೇಟಿಯಾಗಿದ್ದ. ಆರೋಪಿಯ ಆಮಿಷಕ್ಕೆ ಒಳಗಾದ ಯದುಕುಮಾರ್‌ ಆತನ ಸೂಚನೆಯಂತೆ ಯುವತಿಯ ವಿರುದ್ಧ ಬೆದರಿಕೆ ಹಾಗೂ ದುಡ್ಡುಗಾಗಿ ಬೇಡಿಕೆಯಿಟ್ಟಿರುವ ಆರೋಪದಡಿ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದ.

ಈ ವಿಚಾರವನ್ನು ಯುವತಿಯ ಗಮನಕ್ಕೆ ತಾರದೇ 35 ದಿನಗಳಲ್ಲಿ ಸರ್ಕಾರಿ ವಕೀಲರ ಗಮನಕ್ಕೆ ತಂದು ದೋಷಾರೋಪಣಾ ಪಟ್ಟಿಯ ಪ್ರತಿಯನ್ನು ಪೊಲೀಸ್‌ ಐಟಿ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಿದ್ದ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಂದಾಗ ಯುವತಿಗೆ ನೋಟಿಸ್‌ ನೀಡಲಾಗಿತ್ತು. ಇದನ್ನು ಕಂಡು ಆಘಾತಕ್ಕೊಳಗಾದ ಯುವತಿಯು ಈ ವಿಚಾರವನ್ನು ಕೆಂಗೇರಿ ಗೇಟ್‌ ಉಪ ವಿಭಾಗದ ಎಸಿಪಿ ಗಮನಕ್ಕೆ ತಂದಿದ್ದರು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ ಕಾನ್‌ ಸ್ಟೆಬಲ್‌ ಯದುವೀರ್‌ ಕೃತ್ಯ ಬೆಳಕಿಗೆ ಬಂದಿತ್ತು. ಎಸಿಪಿ ಕೊಟ್ಟ ವರದಿ ಆಧರಿಸಿ ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಯದುಕುಮಾರ್‌ ನನ್ನು ಅಮಾನತುಗೊಳಿ ಆದೇಶ ಹೊರಡಿಸಿದ್ದಾರೆ.