ಮೈಸೂರು(Mysuru): ಸ್ವಾತಂತ್ರ್ಯಇತಿಹಾಸದಲ್ಲಿ ಕರ್ನಾಟಕ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಇಲಾಖೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದು ಸಂತಸದ ಸಂಗತಿ ಒಂದೇ ವರ್ಷದಲ್ಲಿ 200 ಕೋಟಿ ರೂಗಳ ವೆಚ್ಚದಲ್ಲಿ 117 ಪೊಲೀಸ್ ಠಾಣೆಗಳನ್ನು ನೂತನವಾಗಿ ನಿರ್ಮಿಸುತ್ತಿದ್ದೇವೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ತಿಳಿಸಿದರು.
ಮೈಸೂರು ತಾಲ್ಲೂಕಿನ ಹಾಲನಹಳ್ಳಿ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಕಟ್ಟಡ ಇಷ್ಟು ವರ್ಷ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಆದ್ದರಿಂದ 2.15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಒಂದು ಸುಸಜ್ಜಿತ ಪೊಲೀಸ್ ಠಾಣೆಯ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಐದು ವರ್ಷಗಳ ಹಿಂದೆ ಶೇ.35 ರಷ್ಟು ಖಾಲಿ ಹುದ್ದೆಗಳಿದ್ದವು. ಆದರೆ ಇಂದು ಕೇವಲ 12 ಸಾವಿರ ಹುದ್ದೆಗಳು ಖಾಲಿ ಇವೆ. ಇತ್ತೀಚೆಗಷ್ಟೇ 5 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹೀಗೆ ಎಲ್ಲಾ ರೀತಿಯಲ್ಲೂ ಪೊಲೀಸ್ ಇಲಾಖೆಯನ್ನು ಬಲಪಡಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ರಚಿಸಬೇಕೆಂಬುದು ನಮ್ಮ ಇಚ್ಛೆಯಾಗಿದೆ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಹರಿಯಾಣದ ಸೂರಜ್ ಕುಂಡ್‌ನಲ್ಲಿ ನಡೆದ ಅಖಿಲ ಭಾರತ ಮಟ್ಟದ ಗೃಹ ಸಚಿವರ ಕಾನ್ಫರೆನ್ಸ್ನಲ್ಲಿ ಕರ್ನಾಟಕ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ವಿಶೇಷವಾಗಿ ಸೀನ್ ಆಫ್ ಕ್ರೈಂ ಆಫೀಸರ್‌ಗಳ ನೇಮಕ, ಆನ್ಲೈನ್ ಮೂಲಕ ಎಫ್ ಐ ಆರ್ ದಾಖಲು ಮಾಡುವ ವಿಧಾನ ಹಾಗೂ ಪೊಲೀಸ್ ಸಹಾಯವಾಣಿ 112 ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದು, ಗ್ರಾಮಾಂತರ ಪ್ರದೇಶದಲ್ಲಿ 20 ನಿಮಿಷ ಹಾಗೂ ನಗರ ಪ್ರದೇಶದಲ್ಲಿ 9 ನಿಮಿಷದಲ್ಲಿ ಪೊಲೀಸರು ಸಾರ್ವಜನಿಕರ ನೆರವಿಗೆ ಆಗಮಿಸುತ್ತಾರೆ. ಠಾಣೆಗೆ ಬಂದು ಕಂಪ್ಲೇಂಟ್ ಕೊಡಬೇಕಾದ ಅವಶ್ಯಕತೆಯೂ ಇರುವುದಿಲ್ಲ. ಅದರೊಂದಿಗೆ ಸೈಬರ್ ವಿಭಾಗವನ್ನು ಸಹ ಬಲಪಡಿಸಿದ್ದೇವೆ ಎಂದರು.
ಮೈಸೂರಿಗೆ ವಿಶೇಷವಾಗಿ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ ಹಾಗೂ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ನೀಡಿರುವುದರಿಂದ ಪೊಲೀಸ್ ಇಲಾಖೆಯನ್ನು ಬಲಪಡಿಸಬೇಕಿರುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ ಒಂದರಂತೆ ಮಹಿಳಾ ಪೊಲೀಸ್ ಠಾಣೆಯನ್ನು ಸಹ ನಿರ್ಮಿಸಲಾಗಿದೆ ಹಾಗೂ ಪ್ರತಿ ಠಾಣೆಯಲ್ಲಿ ಕನಿಷ್ಠ ಮೂರು ಜನರಂತೆ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಶಾಸಕರಾದ ರಾಮದಾಸ್, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಉಪಪೌರರಾದ ರೂಪ, ನಗರ ಪೊಲೀಸ್ ಆಯುಕ್ತರಾದ ಚಂದ್ರಗುಪ್ತ ಸೇರಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಶಾಸಕರುಗಳು ಹಾಗೂ ನಿಗಮ ಮಂಡಳಿ ಅಧ್ಯಕ್ಷರುಗಳು ಉಪಸ್ಥಿತದ್ದರು.