ಬೆಳಗಾವಿ: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಆನೆ ಕಾರ್ಯಾಚರಣೆ ವೇಳೆ ಪುಂಡಾನೆಯ ಜೊತೆ ಕಾದಾಡಿ ಮಡಿದ ಕ್ಯಾಪ್ಟನ್, ಸೀನಿಯರ್, ಬಲಭೀಮ ಎಂದೇ ಖ್ಯಾತವಾಗಿದ್ದ ಹಾಗೂ ಮೈಸೂರಿನ ಜಗದ್ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸ್ಮಾರಕವನ್ನು ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ನಿರ್ಮಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅರ್ಜುನನ ಸಾವಿನ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅವರು, ನಾಡಿನ ಜನರ ಪ್ರೀತಿಗೆ ಪಾತ್ರನಾಗಿದ್ದ ಅರ್ಜನನ ಸಾವು ಅತ್ಯಂತ ದುಃಖದಾಯಕ. ಅರ್ಜನ ಮತ್ತು ನಾಡಿನ ಜನತೆಯ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಈ ಆನೆ ಸಾವು ನಾಡಿನಾದ್ಯಂತ ಇರುವ ಪ್ರಾಣಿ ಪ್ರಿಯರಿಗೆ ಮತ್ತು ಸಾರ್ವಜನಿಕರಿಗೆ ನೋವು ತಂದಿದೆ.
ಹಲವು ಹುಲಿ, ಆನೆ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಅರ್ಜುನನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು, ಅರ್ಜುನ ಸೇವೆಯನ್ನು ನಾಡಿನ ಜನರು ಸದಾ ಸ್ಮರಿಸುವಂತೆ ಹಾಸನ ಮತ್ತು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.