ಮನೆ ಕಾನೂನು ಸರ್ಕಾರಿ ಜಮೀನು ಅತಿಕ್ರಮಿಸಿ ವಸತಿ ಸಮುಚ್ಛಯ ನಿರ್ಮಾಣ: ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

ಸರ್ಕಾರಿ ಜಮೀನು ಅತಿಕ್ರಮಿಸಿ ವಸತಿ ಸಮುಚ್ಛಯ ನಿರ್ಮಾಣ: ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು ನಗರದ ಕೊಡಿಗೆಹಳ್ಳಿ ಮತ್ತು ಕೋತಿಹೊಸಹಳ್ಳಿಯಲ್ಲಿ ಖಾಸಗಿ ಕಂಪೆನಿಗಳು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ವಸತಿ ಸಮುಚ್ಛಯ ನಿರ್ಮಿಸಲು ಅವಕಾಶ ಕಲ್ಪಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಟು ಅಧಿಕಾರಿಗಳ ವಿರುದ್ಧ ಸೇವಾ ನಿಯಮಗಳ ಅಡಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಬಿಡಿಎ ಆಯುಕ್ತರಿಗೆ ನಿರ್ದೇಶಿಸಿದೆ.

ಖಾಸಗಿ ಕಂಪೆನಿಯಿಂದಾಗಿರುವ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಡಿಗೆಹಳ್ಳಿಯ ನಿವಾಸಿ ಅಶ್ವತ್ಥ ನಾರಾಯಣ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರಿ ಜಾಗದ ಒತ್ತುವರಿಯಾಗಿರುವ ಭಾಗವನ್ನು ಮುಂದಿನ 15 ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಯಲಹಂಕ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿದೆ.

ವಿವಾದಿತ ವಸತಿ ಸಮುಚ್ಚಯದಲ್ಲಿ ಫ್ಲ್ಯಾಟ್ ಖರೀದಿಸಿರುವರ ಪರ ವಕೀಲರು “ತಕ್ಷಣ ಒತ್ತುವರಿ ತೆರವು ಮಾಡಿದರೆ ತಮ್ಮ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಹೀಗಾಗಿ, ಒತ್ತುವರಿ ಪ್ರಕ್ರಿಯೆ ಮುಂದೂಡಲು ನಿರ್ದೇಶಿಸಬೇಕು” ಎಂದು ಕೋರಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು “ಒತ್ತುವರಿ ತೆರವು ಮಾಡಬಾರದು ಎಂದಾದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ಏನಿದೆ? ಸರ್ಕಾರಿ ಜಮೀನಿನ ಒತ್ತುವರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಮನೆ ಪಡೆದಿರುವವರಿಗೆ ಈ ಕುರಿತು ಜವಾಬ್ದಾರಿ ಇಲ್ಲವೇ? ನಿಮ್ಮ ಅಹವಾಲು ಏನೇ ಇದ್ದರೂ ತಹಶೀಲ್ದಾರ್ ಮುಂದೆ ಸಲ್ಲಿಸಬಹುದು” ಎಂದು ನಿರ್ದೇಶಿಸಿತು.

ಇದಕ್ಕೂ ಮುನ್ನ, ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಅವರು “ಅರ್ಜಿ ಸಂಬಂಧ ಹೈಕೋರ್ಟ್ ನಿರ್ದೇಶನದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಒತ್ತುವರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಸಲ್ಲಿಸಿರುವ ವರದಿ ಮತ್ತು ಯಲಹಂಕ ತಹಶೀಲ್ದಾರ್ ಅವರು ನೀಡಿರುವ ಅಫಿಡವಿಟ್ ಅನ್ನು ಪೀಠಕ್ಕೆ ಒದಗಿಸಿದರು. ಇದನ್ನು ಪರಿಗಣಿಸಿದ ಪೀಠವು ಪ್ರಕರಣದಲ್ಲಿನ ತಪ್ಪಿತಸ್ಥ ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಆಯುಕ್ತರಿಗೆ ನಿರ್ದೇಶಿಸಿದೆ.