ಮೈಸೂರು: ಗ್ರಾಹಕರೇ ದೇವರು ಎನ್ನುವ ಕಾಲ ಮರೆಯಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೆಹರು ಯುವ ಕೇಂದ್ರ ಮೈಸೂರು ಹಾಗೂ ಕನಕ ಶಕ್ತಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ(ರಿ) ಕುರುಬಾರಳ್ಳಿ ಇವರ ಆಶ್ರಯದಲ್ಲಿ ಮೈಸೂರು ಸಿದ್ದಾರ್ಥ ಬಡಾವಣೆಯ ಕನಕ ಭವನದಲ್ಲಿ ಜರುಗಿದ “ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ದೇಶದ ಮೂಲ ಆಧಾರಸ್ಥಂಭ ಡಾ.ಬಿ.ಆರ್ ಅಂಬೇಡ್ಕರ್ ವಿರಚಿತ ಅತೀ ದೊಡ್ಡ ಗ್ರಂಥ ಭಾರತದ ಸಂವಿಧಾನ.ಅದರ ಅಡಿಯಲ್ಲಿಯೇ ಈ ದೇಶದ ಪ್ರತಿಯೊಂದು ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ.ಈ ದಿನ ನಾವೆಲ್ಲರೂ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸುವ ಮೂಲಕ ನಾಗರಿಕರಿಗೆ ಅರಿವು ಮೂಡಿಸುವ ಸದುದ್ದೇಶದಿಂದ ಒಂದೆಡೆ ಸೇರಿದ್ದೇವೆ ಎಂದರು.
ನಾವು ಕೊಂಡುಕೊಳ್ಳುವ ಪ್ರತಿ ವಸ್ತುಗಳಿಗೂ ಸೂಕ್ತ ತೂಕ,ಬೆಲೆ ,ಗುಣಮಟ್ಟ ನಿಗಧಿ ಪಡಿಸಿರುತ್ತಾರೆ.ಅದರಲ್ಲಿ ಏನೇ ಲೋಪದೋಷಗಳು,ಅನುಮಾನಗಳು ಇದ್ದರೆ ನಾವು ಮಾಲೀಕರನ್ನು ಪ್ರಶ್ನಿಸುವ ಸ್ವಾತಂತ್ರ್ಯವೇ ಗ್ರಾಹಕರ ಮೂಲ ಹಕ್ಕು.ಒಂದು ವೇಳೆ ಸಮಂಜಸವಾದ ಉತ್ತರ ಸಿಗದಿದ್ದಲ್ಲಿ ಸಂಬಂಧಿಸಿದ ಗ್ರಾಹಕರ ಸಂಬಂಧಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ದೂರು ಸಲ್ಲಿಸುವ ಮುಖೇನಾ ಸರಿಯಾದ ನ್ಯಾಯ ಪಡೆಯಬಹುದಾಗಿದೆ.ನಾವು ತೆಗೆದುಕೊಳ್ಳುವ ಪ್ರತಿಯೊ಼ಂದು ವಸ್ತುಗಳಿಗೂ ನಾವು ತೆರಿಗೆಯನ್ನು ಕಟ್ಟುತ್ತೇವೆ.ಆ ನಿಟ್ಟಿನಲ್ಲಿ ನಮ್ಮ ತೆರಿಗೆ ಹಣಗಳು ದೇಶದ ಬೊಕ್ಕಸವನ್ನು ತುಂಬಿಸುತ್ತದೆ.ಆಗಾಗೀ ಇಂತಹ ಗ್ರಾಹಕರ ಹಕ್ಕುಗಳನ್ನು ಸಮರ್ಪಕವಾಗಿ ತಿಳಿದುಕೊಂಡದ್ದೇ ಆದರೆ ನಾವು ಯಾರಿಗೆ ಹಿಂಜರಿಯದೇ ಬಗ್ಗದೇ ನಮ್ಮ ಅನ್ಯಾಯಗಳನ್ನು ಪ್ರಶ್ನಿಸಬಹುದು.ಆದ್ದರಿಂದ ಎಲ್ಲರೂ ಹೆಚ್ಚಿನ ಹಕ್ಕುಗಳನ್ನು ತಿಳಿದುಕೊಂಡದ್ದೇ ಆದರೆ ಇಂತಹ ದಿನಾಚರಣೆಗಳಿಗೆ ಅರ್ಥ ಸಿಗುತ್ತದೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ಗ್ರಾಹಕರನ್ನೇ ದೇವರೆಂದು ನಂಬುತ್ತಿದ್ದರು.ಆದರೆ ಇಂದು ಕೇವಲ ಆ ಕ್ಷಣದ ವ್ಯಾಪಾರ,ಲಾಭಕ್ಕಾಗಿ ಆತೊರೆದು ಉತ್ತಮ ಗುಣಮಟ್ಟ,ನೈಜ ಬೆಲೆಯ ಮಾರಾಟಗಳು ಕ್ಷೀಣಿಸುತ್ತಿವೆ.ಬಹು ಆಕರ್ಷಣೀಯ ಆಫರ್ ಗಳು ಎಂದು ಜನರನ್ನು ದಿಕ್ಕು ತಪ್ಪಿಸುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ.ಆ ದಿಸೆಯಲ್ಲಿ ಗ್ರಾಹಕರ ಹಕ್ಕುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡದ್ದೇ ಅದರೆ ಎಂಥಹ ಸವಾಲುಗಳನ್ನು ಎದುರಿಸಬಹುದೆಂದು ತಿಳಿಸಿದರು.
ಕಾರ್ಯಕ್ರಮವನ್ನು ಯಶ್ ಹೋಂಡಾ ಶೋರೂಂ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಉದ್ಘಾಟಿಸಿದರು.
ನಿವೃತ್ತ ಮುಖ್ಯ ಶಿಕ್ಷಕರಾದ ಮನೋಹರ್,ಸಿವಿಲ್ ಕಂಟ್ರಾಕ್ಟರ್ ಎಂ ಎನ್ ಚಿನ್ನಸ್ವಾಮಿ,ಕನಕ ಶಕ್ತಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಕಮಲ,ಕಾರ್ಮಿಕ ಕಾಂಗ್ರೆಸ್ ವಿಭಾಗದ ಅಧ್ಯಕ್ಷರಾದ ವಿನಯ್ ಕುಮಾರ್ ,ಗುಣಶೇಖರ್ ಹಾಜರಿದ್ದರು.