ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಮೂವರು ಸಾವಿಗೀಡಾಗಿದ್ದರೆ, ನೂರು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವಂತಹ ಘಟನೆ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಜುಲೈ 31ರಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ವರದಿಯಲ್ಲಿ ಕಾಲರಾ ಮಾದರಿ ಅಂಶ ಪತ್ತೆಯಾಗಿದೆ.
ವಾಂತಿ, ಭೇದಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಿದ್ದು, ನೀರು ಕುಡಿಯಲು ಯೋಗ್ಯವಲ್ಲವೆಂದು ಚಿತ್ರದುರ್ಗ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿಯಲ್ಲಿ ಉಲ್ಲೇಖಿಸಿದೆ. ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಾಕಿ ಇದೆ.
ಘಟನೆ ಹಿನ್ನೆಲೆ
ಕವಾಡಿಗರಹಟ್ಟಿಯ ಸುಮಾರು ಒಂದು ನೂರು ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಇಷ್ಟಕ್ಕೆಲ್ಲ ಕಾರಣ ನೀರಗಂಟಿ ಸುರೇಶ. ದಲಿತ ಯುವಕ ಸವರ್ಣಿಯ ಸಮುದಾಯದ ಬಾಲೆಯನ್ನು ಪ್ರೇಮಿಸಿದ್ದು ಫೋಕ್ಸೋ ಪ್ರಕರಣ ದಾಖಲಾಗಿತ್ತು. ಅದೇ ಕಾರಣಕ್ಕೆ ದ್ವೇಷದಿಂದ ನಿರಗಂಟಿ ಸುರೇಶನೇ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸಿದ್ದಾನೆ. ಮೊದಲು ನೀರಗಂಟಿ ಸುರೇಶನ ಬಂಧಿಸಬೇಕೆಂದು ಮೃತ ಮಂಜುಳಾ ಅವರ ಮಾವ ರಾಮಣ್ಣ ಆಗ್ರಹಿಸಿದ್ದಾರೆ.
ಅನುಮಾನಸ್ಪದ ಪ್ರಕರಣ ದಾಖಲಿಸಿಕೊಂಡು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೀರಗಂಟಿ ಸುರೇಶ ಬಗ್ಗೆ ವಿಷ ಬೆರೆಸಿದ ಆರೋಪಗಳಿವೆ. ಈಗಾಗಲೇ ಸುರೇಶ್ ವಿಚಾರಣೆ ನಡೆಸಿದ್ದೇವೆ. ಸದ್ಯ ಪುರಾವೆ ಇಲ್ಲದ ಕಾರಣ ಕರೆದಾಗ ಬರುವಂತೆ ಹೇಳಿ ಕಳಿಸಿದ್ದೇವೆ. ಎಫ್ ಎಸ್ ಎಲ್ ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.